ಬೆಂಗಳೂರು,ಮಾ.7- ಬಿಜೆಪಿ ತೊರೆದು ಸಾಕಷ್ಟು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ, ಹಲವು ಮಂದಿ ಹಾಲಿ ಶಾಸಕರು ಈ ಪಟ್ಟಿಯಲ್ಲಿದ್ದಾರೆ. ಸದ್ಯಕ್ಕೆ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರಕಟಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಕ್ಷೇತ್ರದ ಮಾಜಿ ಶಾಸಕ ನಂಜುಂಡಸ್ವಾಮಿ, ವಿಜಯಪುರದ ನಾಗಠಾಣಾ ಕ್ಷೇತ್ರದ ಮಾಜಿ ಶಾಸಕ ಮನೋಹರ್ ಐನಾಪುರ, ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಅವರು ಇಂದು ಬಿಜೆಪಿ ತೆರೆದು ಬೇಷರತ್ ಆಗಿ ಕಾಂಗ್ರೆಸ್ ಸೇರಿದ್ದಾರೆ ಎಂದರು.
ಕಾಂಗ್ರೆಸ್ ಸೇರುವವರ ಪಟ್ಟಿ ದೊಡ್ಡ ಪಟ್ಟಿ ನಮ್ಮ ಮುಂದೆ ಇತ್ತು, ನಾವು ಪ್ರಜಾಧ್ವನಿ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದೇವು. ಹಾಗಾಗಿ ನಮ್ಮಲ್ಲಿ ಚರ್ಚೆ ಮಾಡಿ ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಸಮಯ ಇರಲಿಲ್ಲ. ಸಾಂಕೇತಿಕವಾಗಿ ಇಂದು ಇಬ್ಬರು ಮಾಜಿ ಶಾಸಕರು ಹಾಗೂ ಒಬ್ಬ ಮಾಜಿ ಮೇಯರ್ ಮಾತ್ರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಂದ ಹುಚ್ಚು ಪ್ರೇಮಿ
ಮುಂದಿನ ದಿನಗಳಲ್ಲಿ ಹಾಲಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ. ಅನೇಕ ನಾಯಕರು ಜಿಲ್ಲೆಗಳಲ್ಲೇ ಸೇರ್ಪಡೆಯಾಗುತ್ತಾರೆ. ಪ್ರಮುಖರನ್ನು ಸಮಯ ಲಭ್ಯವಿದ್ದಾಗ ಕೆಪಿಸಿಸಿ ಕಚೇರಿಯಲ್ಲಿ ಸೇರಿಸಿಕೊಳ್ಳುತ್ತೇವೆ ಎಂದರು.
ಬಿಜೆಪಿ ಪ್ರತಿ ದಿನ ಆಂತರಿಕವಾಗಿ ಶಾಕಿಂಗ್ ನ್ಯೂಸ್ ಹೆದರಿಸುತ್ತಿದೆ. ಅವರಲ್ಲಿ ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಈಗ ಪ್ರತಿ ದಿನ ರಾಜ್ಯಕ್ಕೆ ಬರುತ್ತಿದ್ದಾರೆ. ಈ ಹಿಂದೆ ಬರ, ನೆರೆ, ಕೊರೊನಾ ಸೇರಿ ಸಂಕಷ್ಟ ಕಾಲದಲ್ಲಿ ಇವರ್ಯಾರು ಬಂದಿರಲಿಲ್ಲ. ಅವರಿಗೆ ಮಾನವೀಯತೆ, ಮನುಷ್ಯತ್ವ ಜನರಿಗೆ ನೆರವು ನೀಡುವುದ್ಯಾವುದು ಬೇಕಿಲ್ಲ. ಕೇವಲ ಮತಬೇಟೆಯಷ್ಟೆ ಬಿಜೆಪಿ ರಾಷ್ಟ್ರೀಯ ನಾಯಕ ಉದ್ದೇಶ ಎಂದು ಜನ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಗುಜರಾತ್ ಬಳಿಕ ತಕ್ಷಣವೇ ಚುನಾವಣೆ ನಡೆಸಲು ಬಿಜೆಪಿ ತಯಾರಿ ನಡೆಸಿತ್ತು. ಎಷ್ಟು ಬೇಗ ಚುನಾವಣೆ ನಡೆಸಿದರೂ ಅಷ್ಟು ಕಾಂಗ್ರೆಸ್‍ಗೆ ಲಾಭವಾಗಲಿದೆ. ಬಹುತೇಕ ಮಾರ್ಚ್ 28ರಂದು ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಹಿಂದಿನ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲ್ಲುವ ವರದಿ ಇತ್ತು. ಅದು ಈಗ 140ಕ್ಕೂ ಹೆಚ್ಚಾಗಿದೆ ಎಂದು ಹೇಳಿದರು.
ಈ ಸರ್ಕಾರ ಪ್ರತಿ ದಿನ ಟೆಂಡರ್ ನಡೆಸಿ ಹಣ ವಸೂಲಿ ಮಾಡುತ್ತಿದೆ. ಹಗರಣಗಳು ವ್ಯಾಪಕವಾಗಿವೆ, ಕೇಂದ್ರ ಚುನಾವಣಾ ಆಯೋಗ ತಕ್ಷಣವೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಮುಂದೆ ಭ್ರಷ್ಟ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದಾರೆ. ಅಂದರೆ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಭ್ರಷ್ಟಚಾರ ತುಂಬಿ ತುಳುಕುತ್ತಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ, ಅದಕ್ಕಾಗಿ ಅವರನ್ನು ಕೇಂದ್ರ ಸಚಿವರನ್ನು ಅಭಿನಂದಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು
ಗೃಹಜ್ಯೋತಿ ಯೋಜನೆಯನ್ನು ಬೋಗಸ್ ಸ್ಕೀಂ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ. ಈ ವಿಷಯದಲ್ಲಿ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹಿಂದೆ ಇಂಧನ ಸಚಿವನಾಗಿ ನಾನು 10 ಸಾವಿರ ಮೇಗಾವ್ಯಾಟ್ ಇದ್ದ ವಿದ್ಯತ್ ಉತ್ಪಾದನೆಯನ್ನು 20 ಸಾವಿರ ಮೆಗಾವ್ಯಾಟ್ ಹೆಚ್ಚಿಸಿದ್ದೆ. 120 ತಾಲ್ಲೂಕುಗಳಲ್ಲಿ ಸೌರಶಕ್ತಿ ಉತ್ಪಾದನೆ ಮಾಡಿ ದೇಶಕ್ಕೆ ಮಾದರಿಯಾಗಿದ್ದೆ. ನಾವು ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ 3900 ಕೋಟಿ ರೂಪಾಯಿ ಆದಾಯ ಗಳಿಸಿದ್ದಾಗಿ ಈಗಿನ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದೆ. ಮುಖ್ಯಮಂತ್ರಿ ಅದನ್ನು ಮರೆತಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದೃವನಾರಾಯಣ್, ಸಲೀಂ ಅಹಮದ್, ಮಾಜಿ ಸಚಿವರಾದ ಉಮಾಶ್ರೀ, ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ಮಾಜಿ ಶಾಸಕ ಐವಾನ್ ಡಿಸೋಜಾ ಮತ್ತಿತರರು ಭಾಗವಹಿಸಿದ್ದರು.
BJP, MLAs, join, Congress, KPCC president, DK Shivakumar,