ಕಲಾಪದಲ್ಲಿ ಪಾಲ್ಗೊಳ್ಳಲು ಬಿಜೆಪಿ ಶಾಸಕರ ನಿರಾಸಕ್ತಿ

Social Share

ಬೆಂಗಳೂರು,ಸೆ.14- ಮಳೆಗಾಲದ ಅಧಿವೇಶನ ಆರಂಭವಾಗಿದ್ದರೂ ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ಆಡಳಿತಾರೂಢ ಬಿಜೆಪಿ ಶಾಸಕರಲ್ಲಿ ಸಂಭ್ರಮ, ಉತ್ಸಾಹ, ಲವಲವಿಕೆ ಕಾಣದೆ ಗರಬಡಿದ ಸ್ಥಿತಿ ಕಲಾಪದಲ್ಲಿ ಕಂಡುಬರುತ್ತಿದೆ. ಅಧಿವೇಶನ ಆರಂಭವಾಗಿ ಎರಡು ದಿನವಾದರೂ ಆಡಳಿತಾರೂಢ ಬಿಜೆಪಿ ಶಾಸಕರಲ್ಲಿ ಹಿಂದೆ ಇದ್ದಂತಹ ಉತ್ಸಾಹ ಕಂಡುಬರುತ್ತಿಲ್ಲ ಬರಬೇಕೆಂಬ ಒತ್ತಡಕ್ಕಾಗಿ ಸದನಕ್ಕೆ ಬರುತ್ತಿದ್ದಾರೆ ಹೊರತು ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಕಳೆದ ಎರಡು ದಿನಗಳಿಂದ ಬಿಜೆಪಿಯ 121 ಶಾಸಕರ ಪೈಕಿ ಕನಿಷ್ಟ ಪಕ್ಷ ಸದನಕ್ಕೆ 50 ಶಾಸಕರು ಕೂಡ ಹಾಜರಾಗಿಲ್ಲ. ಮೊದಲ ಸಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್.ಅಶೋಕ್, ಮಾದುಸ್ವಾಮಿ, ಸೋಮಣ್ಣ ಬಿಟ್ಟರೆ ಹಿಂದಿನ ಸಾಲಿನಲ್ಲಿ ಬೆರಳೆಣಿಕೆ ಶಾಸಕರು ಆಸೀನರಾಗಿದ್ದರು.

ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ

ಬಂದವರು ಕೂಡ ಹೋದಪುಟ್ಟ, ಬಂದಪುಟ್ಟ ಎಂಬಂತೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಸದನಕ್ಕೆ ಟಾಟಾ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಸಾಮಾನ್ಯವಾಗಿ ಈ ಹಿಂದಿನ ಅವೇಶನದ ಸಂದರ್ಭದಲ್ಲಿ ಎಷ್ಟೇ ಆರೋಪಗಳಿದ್ದರೂ ಬಿಜೆಪಿ ಶಾಸಕರು ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರತಿಪಕ್ಷಗಳ ವಿರುದ್ಧ ಮುಗಿಬೀಳುತ್ತಿದ್ದರು.

ಒಂದು ಕಡೆ ಸರ್ಕಾರದ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳು, ಮತ್ತೊಂದು ಕಡೆ ಸಚಿವ ಸಂಪುಟ ಪುನಾರಚನೆಯಾಗದಿರುವುದು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಮೀನಾಮೇಷ ಹೀಗೆ ಹತ್ತು ಹಲವು ಕಾರಣಗಳಿಂದ ಶಾಸಕರು ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಹುತೇಕ ಶಾಸಕರು ಸದನಕ್ಕೆ ಹಾಜರಿರುತ್ತಿದ್ದರು. ಪ್ರತಿಪಕ್ಷಗಳು ಏನೇ ಆರೋಪಗಳು ಮಾಡಿದರೂ ಅದಕ್ಕೆ ತಕ್ಷಣವೇ ಶಾಸಕರು ಪ್ರತಿಪಕ್ಷಗಳ ವಿರುದ್ಧ ಮುಗಿ ಬೀಳುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು.

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ

ಮಂಗಳವಾರ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಯಮ 69ರಡಿ ಪ್ರವಾಹ ಪರಿಸ್ಥಿತಿ ಕುರಿತಂತೆ ಚರ್ಚೆ ಮಾಡುತ್ತಿದ್ದ ವೇಳೆ, ಮಡಿಕೇರಿಯಲ್ಲಿ ತಮ್ಮ ವಾಹನಕ್ಕೆ ಮೊಟ್ಟೆ ಎಸೆದುದ್ದನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಮುಗಿಬಿದ್ದರು.
ಈ ವೇಳೆ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಪ್ರೀತಮ್ ಗೌಡ ಸೇರಿದಂತೆ ಬೆರಳಣಿಕೆಯ ಶಾಸಕರು ಸರ್ಕಾರದ ಪರವಾಗಿ ನಿಂತರು.

ಉಳಿದ ಶಾಸಕರು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮುಗುಮ್ಮಾಗಿ ಕುಳಿತಿದ್ದರು. ಅತ್ತ ಪ್ರತಿಪಕ್ಷದಲ್ಲಿ ಮಾತ್ರ ಸಿದ್ದರಾಮಯ್ಯನವರ ಪರವಾಗಿ ಶಾಸಕರು ತಾ ಮುಂದು, ನಾ ಮುಂದು ಎಂಬಂತೆ ಎದ್ದು ನಿಂತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹೀಗೆ ಮಳೆಗಾಲದ ಅವೇಶನ ಆಡಳಿತಾರೂಢ ಬಿಜೆಪಿಯಲ್ಲಿ ಒಂದು ರೀತಿ ಗರಬಡೆದ ಸ್ಥಿತಿಯನ್ನು ನಿರ್ಮಾಣ ಮಾಡಿದೆ.

Articles You Might Like

Share This Article