ವಾದ್ರ,ಜ.25- ಸೇತುವೆ ಮೇಲಿಂದ ಕಾರು ಕೆಳಗೆ ಬಿದ್ದ ಪರಿಣಾಮ ಶಾಸಕನ ಮಗ ಸೇರಿದಂತೆ ಏಳು ವೈದ್ಯಕೀಯ ವಿದ್ಯಾರ್ಥಿಗಳು ದುರ್ಮರಣಕ್ಕೆ ಈಡಾಗಿರುವ ಘಟನೆ ಮಹಾರಾಷ್ಟ್ರ ವಾದ್ರ ಜಿಲ್ಲೆಯ ಹೊರವಲಯದ ವಾದ್ರ-ಯವತಕಲ್ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಸಾವಂಗಿ ವೈದ್ಯಕೀಯ ಕಾಲೇಜಿನ ನೀರಜ್ ಚವ್ಹಾಣ್( ಪ್ರಥಮ ವರ್ಷದ ಎಂಬಿಬಿಎಸ್), ನಿತೀಶ್ ಸಿಂಗ್( 2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್(2018 ಎಂಬಿಬಿಎಸ್ ಅಂತಿಮ ವರ್ಷದ ಭಾಗ-1) ಪ್ರತುಷ್ ಸಿಂಗ್(2017 ಎಂಬಿಬಿಎಸ್ ಅಂತಿಮ ವರ್ಷದ ಭಾಗ-2), ಶುಭಂ ಜೈಸ್ವಾಲ್(2017 ಎಂಬಿಬಿಎಸ್ ಅಂತಿಮ ವರ್ಷ) ಪವನ್ ಶಕ್ತಿ(2020 ಎಂಬಿಬಿಎಸ್ ಅಂತಿಮ ವರ್ಷ) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಗೊಂಡ್ಯಾ ಜಿಲ್ಲೆಯ ತಿರೋಡ ಶಾಸಕ ವಿಜಯ್ ರಹಾಂಗ್ ಡೆಲ್ ಅವರ ಪುತ್ರ ಅವಿಷ್ಕಾರ ಕೂಡ ಸಾವನ್ನಪ್ಪಿದ್ದಾರೆ. ವಾದ್ರ ಜಿಲ್ಲೆಯ ಸೆಲ್ಸಾರ್ ಪ್ರದೇಶದಲ್ಲಿ ರಾತ್ರಿ 1.30ರ ಸುಮಾರಿಗೆ ದಿಯೋಲಿಯಿಂದ ವಾದ್ರ ಕಡೆಗೆ ಬರುತ್ತಿದ್ದ ಝೇಲೊ ಕಾರು ಸೇತುವೆಯಿಂದ ಸುಮಾರು ಐವತ್ತು ಅಡಿ ಆಳಕ್ಕೆ ನೇರವಾಗಿ ಕೆಳಗೆ ಬಿದ್ದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಆಸ್ಪತ್ರೆ ಬಳಿ ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂತಾಪ: ಅಪಘಾತದಲ್ಲಿ ಏಳು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ದಿಗ್ಬ್ರಮೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆ ದುರದೃಷ್ಟಕರ ಎಂದು ಹೇಳಿರುವ ಅವರು, ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮೃತರ ಕುಟುಂಬದವರಿಗೆ ಎರಡು ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.
