ರಾಜ್ಯ ರಾಜ್ಯಕಾರಣಕ್ಕೆ ಮರಳಲು ತೆರೆಮರೆಯಲ್ಲಿ ಸಂಸದರ ಕಸರತ್ತು

Social Share

ಬೆಂಗಳೂರು,ಜು.13- ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗಲೇ ಕೆಲವು ಸಂಸದರು ರಾಜ್ಯ ರಾಜ್ಯಕಾರಣಕ್ಕೆ ಮರಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. 2019 ರ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಸಂಸತ್ ಪ್ರವೇಶಿಸಿದ್ದ ಬಿಜೆಪಿಯ ಒಂದು ಡಜನ್ ಗೂ ಅಧಿಕ ಸಂಸದರು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.

ಅದರಲ್ಲೂ ವಿಶೇಷವಾಗಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಂಸದರಾದ ಶಿವಕುಮಾರ್ ಉದಾಸಿ, ಬಿ.ವೈ.ರಾಘವೇಂದ್ರ,
ಕರಡಿ ಸಂಗಣ್ಣ, ಪಿ.ಸಿ.ಮೋಹನ್, ಮಂಗಳ ಸುರೇಶ್ ಅಂಗಡಿ, ಡಿ.ವಿ.ಸದಾನಂದಗೌಡ, ಉಮೇಶ್ ಜಾಧವ್, ಜಿ.ಎಂ.ಸಿದ್ದೇಶ್ವರ, ಸೇರಿದಂತೆ ಮತ್ತಿತರರು ವಿಧಾನಸಭೆ ಪ್ರವೇಶಿಸಿಲು ಸುರಕ್ಷಿತ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

ಬಹುತೇಕ ಸಂಸದರಿಗೆ ದೆಹಲಿ ರಾಜಕಾರಣ ಒಗ್ಗದೆ ಇರುವುದು ಒಂದು ಕಾರಣವಾದರೆ ಭಾಷೆ ಮೇಲೆ ಹಿಡಿತ ಇಲ್ಲದಿರುವುದು ಹಾಗೂ ನಿರೀಕ್ಷಿತ ಸ್ಥಾನಮಾನಗಳು ಸಿಗದಿರುವುದು ಕೂಡ ಮತ್ತೊಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಹೀಗಾಗಿಯೇ ದೆಹಲಿ ಎಂದರೆ ಒಂದು ರೀತಿ ಹಿಂಜರಿಯುತ್ತಿರುವ ಬಹುತೇಕ ಸಂಸದರು ತಮಗೆ ಲೋಕಸಭೆ ಚುನಾವಣೆಗಿಂತ ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಒಂದು ಅವಕಾಶ ಕಲ್ಪಿಸಬೇಕೆಂದು ವರಿಷ್ಠರ ಬಳಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲವು ಸಂಸದರ ಕಾರ್ಯ ವೈಖರಿ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅಸಮಾಧಾನ ಹೊರಹಾಕಿದ್ದು, 2024ರ ಚುನಾವಣೆಯಲ್ಲಿ ಟಿಕೆಟ್ ಸಿಗುವ ಖಾತರಿ ಇಲ್ಲದಿರುವುದರಿಂದ ವಿಧಾನಸಭೆ ಪ್ರವೇಶಿಸಲು ಬಹುತೇಕ ಸಂಸದರು ಒಲವು ತೋರುತ್ತಿದ್ದಾರೆ.

ಕೇಂದ್ರದಲ್ಲಿ ರೈತ ಕಲ್ಯಾಣ ಹಾಗೂ ಕೃಷಿ ಸಚಿವರಾಗಿರುವ ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಈ ಹಿಂದೆ ವಿಧಾನಪರಿಷತ್ ಪ್ರವೇಶಿಸುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು. 2008ರಲ್ಲಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಯಲ್ಲಿ ಸ್ರ್ಪಧಿಸಿ ವಿಜೇತರಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಇಂಧನ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ರಾಜ್ಯ ರಾಜಕಾರಣದ ಮೇಲೆ ಸದಾ ಒಂದು ಕಣ್ಣಿಟ್ಟಿರುವ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಹೌದು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಶೋಭ ಕರಂದ್ಲಾಜೆ ಹೆಸರು ಕೇಳಿಬಂದಿತ್ತು.
ಆದರೆ ಅದೃಷ್ಟ ಬೊಮ್ಮಾಯಿ ಅವರಿಗೆ ಖುಲಾಯಿಸಿದ್ದರಿಂದ ಸಿಎಂ ಹುದ್ದೆ ಕೈ ತಪ್ಪಿತ್ತು. 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಿಎಂ ಹುದ್ದೆಗೆ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬೆಂಗಳೂರಿನ ರಾಜಾಜಿನಗರ ಇಲ್ಲವೇ ಕರಾವಳಿ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಕೂಡ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ.

ಹಾಲಿ ಶಾಸಕ ಹರೀಶ್ ಪೂಂಜಾಗೆ ಲೋಕಸಭೆ ಟಿಕೆಟ್ ನೀಡಿ ಕಟೀಲ್ ಅವರು ಬೆಳ್ತಂಗಡಿಯಿಂದ ಸ್ರ್ಪಧಿಸುವ ಸಾಧ್ಯತೆಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ. ಹಾವೇರಿ ಸಂಸದ ಶಿವಕುಮಾರ್ ಉದಾಸಿ ಕೂಡ ತಮ್ಮ ತಂದೆ ಸಿಎಂ ಉದಾಸಿ ಪ್ರತಿನಿಸುತ್ತಿದ್ದ ಹಾನಗಲ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆ ನಡೆದ ಉಪಚುನಾವಣೆಯಲ್ಲೆ ಅವರು ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ಮುಖಂಡ ಶಿವರಾಜ್ ಸಜ್ಜನವರಿಗೆ ಟಿಕೆಟ್ ನೀಡಲಾಗಿತ್ತು.

ಕೋವಿಡ್ ಕಾರಣದಿಂದ ನಿಧನರಾದ ಸುರೇಶ್ ಅಂಗಡಿ ಅವರ ಪತ್ನಿ ಮಂಗಳ ಅಂಗಡಿ ಕೂಡ ಬೆಳಗಾವಿ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಶಾಸಕ ಪಿ.ಸಿ.ಮೋಹನ್ ಕೂಡ ಪ್ರಬಲ ಆಕಾಂಕ್ಷಿ. ಈ ಹಿಂದೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಸ್ರ್ಪಧಿಸಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ವಿರುದ್ದ ಪರಾಭವಗೊಂಡಿದ್ದರು.

ಇದೇ ರೀತಿ ಕೇಂದ್ರ ಸಚಿವರಾಗಿರುವ ಎ.ನಾರಾಯಣಸ್ವಾಮಿ ಅವರು ಆನೇಕಲ್‍ನಿಂದ ಸ್ರ್ಪಧಿಸುವ ಇಂಗಿತವನ್ನು ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸತತ ನಾಲ್ಕು ಬಾರಿ ಗೆದ್ದು ಕಳೆದೆರಡು ಚುನಾವಣೆಗಳಲ್ಲಿ ಪರಾಭವಗೊಂಡಿದ್ದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ಅವರು ತಮಗೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕೂಡ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ.

ಈ ಹಿಂದೆ ಶಿಕಾರಿಪುರದಿಂದ ಒಂದು ಬಾರಿ ಗೆದ್ದು ಶಾಸಕರಾಗಿದ್ದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಸ್ತುತ ಸಂಸದರು ಹೌದು. ತಮ್ಮ ತಂದೆ ಪ್ರತಿನಿಸುತ್ತಿದ್ದ ಶಿಕಾರಿಪುರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಸ್ರ್ಪಸಲು ಸಿದ್ದ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಇದೇ ರೀತಿ ಬಹುತೇಕ ಸಂಸದರು ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಸಲು ಪೂರ್ವ ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಆದರೆ ವರಿಷ್ಠರು ಅಷ್ಟು ಸರಳವಾಗಿ ಇವರೆಲ್ಲರಿಗೂ ಟಿಕೆಟ್ ಕೊಡುವರೇ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ.

Articles You Might Like

Share This Article