ಭಾನುವಾರ ಬಳ್ಳಾರಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ, ಚುನಾವಣೆಗೆ ರಣಕಹಳೆ

Social Share

ಬೆಂಗಳೂರು,ನ.17-ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.3ರಿಂದ 7ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರ ಇದೇ ಭಾನುವಾರದಂದು ಬಳ್ಳಾರಿಯಲ್ಲಿ ನವಶಕ್ತಿ ಸಮಾವೇಶ ನಡೆಸುವ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ.

ಸಮಾವೇಶಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರು, ಶಾಸಕರು, ಸಂಸದರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ಸಮಾವೇಶಕ್ಕೆ ಅಂದಾಜು ಐದು ಲಕ್ಷ ಕಾರ್ಯಕರ್ತರನ್ನು ಸೇರಿಸುವ ಗುರಿಯನ್ನು ಹೊಂದಲಾಗಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಸಮಾವೇಶ ನಡೆಸಲಾಗುತ್ತಿದೆ.ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡಿದ ನಂತರ ಸಮುದಾಯದ ಜತೆ ಬಿಜೆಪಿ ಇರಲಿದೆ ಎಂಬ ಸಂದೇಶವನ್ನು ರವಾನಿಸಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುತ್ತದೆ.

ಕಳೆದ ಒಂದು ತಿಂಗಳಿನಿಂದ ಸಚಿವ ಶ್ರೀರಾಮುಲು, ಶಾಸಕರಾದ ರಾಜುಗೌಡ ನಾಯಕ್, ಶಿವನಗೌಡ ನಾಯಕ್ ಸೇರಿದಂತೆ ಮತ್ತಿತರರು ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮುದಾಯದವರನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿದ್ದಾರೆ.

ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಆಗಮಿಸುತ್ತಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಮೀಸಲಾತಿಯನ್ನು ತಮ್ಮ ಸರ್ಕಾರವೇ ಹೆಚ್ಚಳ ಮಾಡಿದ್ದು ಎಂಬ ಸಂದೇಶವನ್ನು ರವಾನಿಸಲಾಗುತ್ತದೆ. ಬಳ್ಳಾರಿಯ ಜಿ-ಸ್ಕ್ವೇರ್ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಈಗಾಗಲೇ ಬರದ ಸಿದ್ದತೆಗಳು ಪೂರ್ಣಗೊಂಡಿವೆ.

ವಾಲ್ಮೀಕಿ ಸಮುದಾಯವನ್ನು ಮತ್ತಷ್ಟು ಸೆಳೆಯಲು ಬಿಜೆಪಿ ಸರ್ಕಸ್ ನಡೆಸುತ್ತಿದ್ದು, ಜಾತಿವಾರು ಸಮಾವೇಶಗಳನ್ನು ನಡೆಸಲು ಮುಂದಾಗಿದೆ. ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮತ್ತಿತರ ಕಡೆ ಜಾತಿವಾರು ಸಮಾವೇಶ ನಡೆಸಿ ಸಮುದಾಯಗಳನ್ನು ಸೆಳೆದುಕೊಳ್ಳುವುದು ಬಿಜೆಪಿ ಉದ್ದೇಶವಾಗಿದೆ.

Articles You Might Like

Share This Article