ಬೆಂಗಳೂರು,ಫೆ.28- ನೀವು ಯಾರ ವಿರುದ್ಧ ಹೋರಾಟ ನಡೆಸಬೇಕೆಂಬುದನ್ನು ಮೊದಲು ನಿರ್ಧರಿಸಿ. ಆ ಮೇಲೆ ಪಾದಯಾತ್ರೆ ನಾಟಕ ಮುಂದುವರಿಸಿ ಎಂದು ಕಾಂಗ್ರೆಸ್ ನಡೆಸುತ್ತಿರುವ 2ನೇ ಹಂತದ ಮೇಕೆದಾಟು ಪಾದಯಾತ್ರೆಗೆ ಬಿಜೆಪಿ ವ್ಯಂಗ್ಯವಾಡಿದೆ.
ಮೇಕೆದಾಟು ಪಾದಯಾತ್ರೆ ಎಂಬುದು ಈಗ ಡಿ.ಕೆ. ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ. ಮೂವತ್ತು ದಿನದಲ್ಲಿ ಇಂಗ್ಲೀಷ್ ಕಲಿಯುವುದು ಹೇಗೆ? ಎಂಬಂತಹ ಪುಸ್ತಕಗಳ ರೀತಿಯಲ್ಲಿ ಪಾದಯಾತ್ರೆ ಮೂಲಕ ನಾಯಕರಾಗಿ ಎಂಬ ಪುಸ್ತಕ ಬರೆಯಬಹುದೇನೋ ಎಂದು ಲೇವಡಿ ಮಾಡಿದೆ.
ಕಾವೇರಿ ನೀರಿನ ಪ್ರತಿ ಹನಿಯಲ್ಲೂ ಈ ಭಾಗದ ಜನರ ಹಕ್ಕಿದೆ. ಇದು ಚಲಾವಣೆಯಾಗಬೇಕು. ಆದರೆ ಬೆಂಗಳೂರಿನಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಇದಕ್ಕೆ ಅಡ್ಡಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿದ್ದಾರೆ.
ಒಂದು ರಾಜ್ಯದ ಉಸ್ತುವಾರಿಯಾದವರಿಗೆ ಕನಿಷ್ಠ ಮಾಹಿತಿ ಇಲ್ಲದಿರುವುದು ಹಾಸ್ಯಾಸ್ಪದ ಎಂದು ಟೀಕಿಸಿರುವ ಬಿಜೆಪಿ, ಸುರ್ಜೇವಾಲಾ ಅವರೇ, ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಸ್ಥಿತಿ ಆಕಾಶ ನೋಡುವುದಕ್ಕೆ ನೂಕು ನುಗ್ಗಲು ಎಂಬಂತಾಗಿದೆ.
