ಬೆಂಗಳೂರು,ಆ.26- ಪಕ್ಷದ ನೀತಿ ನಿರೂಪಣೆಗಳು ಹಾಗೂ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ನೇಮಕವಾದ ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿರುವುದು ಸಚಿವ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.
ಎರಡು ದಿನಗಳ ಕಾಲ ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್ ಹಾಗೂ ಆರ್‍ಎಸ್‍ಎಸ್ ಮುಖ್ಯಸ್ಥ ದತ್ತಾತ್ರೆಯ ಹೊಸಬಾಳೆ ಅವರನ್ನು ಭೇಟಿಯಾಗಲಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಇವತ್ತು, ನಾಳೆ ದೆಹಲಿಯಲ್ಲಿ ಇರುತ್ತೇನೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿದ್ದೇನೆ. ನಂತರ ಅಮಿತ್ ಶಾ ಹಾಗೂ ಜೆ.ಪಿ.ನಡ್ದಾ ಅವರನ್ನು ಭೇಟಿಯಾಗುತ್ತಿದ್ದೇನೆ ಎಂದು ತಿಳಿಸಿದರು.
ನಾಳೆ ಸಂಜೆ ಬೆಂಗಳೂರಿಗೆ ವಾಪಸ್ ಬರಬೇಕೆಂದುಕೊಂಡಿದ್ದೇನೆ. ರಾಜನಾಥ್ ಸಿಂಗ್ ಸೇರಿದಂತೆ ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೇ. ಮುಂದೆ ಏನು ಕೆಲಸ ಮಾಡಬೇಕು ಎಂದು ಅವರ ಸಲಹೆ ಕೇಳುವುದು ನನ್ನ ಕರ್ತವ್ಯ. ಈ ಭೇಟಿಯ ವೇಳೆ ಆರ್‍ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಸಹ ಭೇಟಿಯಾಗಲು ಪ್ರಯತ್ನಿಸುವುದಾಗಿ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸರಿಸುಮಾರು ಒಂದು ವರ್ಷದ ನಂತರ ಯಡಿಯೂರಪ್ಪ ಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗುತ್ತಿದ್ದು, ಸಹಜವಾಗಿ ಕರ್ನಾಟಕದ ರಾಜ್ಯಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂದು ಒಂದು ಗುಂಪು ಒತ್ತಾಯಿಸುತ್ತಿದ್ದರೆ, ಮತ್ತೊಂದು ಗುಂಪು ವಿಸ್ತರಣೆ ಜೊತೆಗೆ ಪುನಾರಚನೆಯಾಗಬೇಕೆಂದು ಸಿಎಂ ಮೇಲೆ ನಿರಂತರ ಒತ್ತಡ ಹಾಕಿದೆ.
ಸದ್ಯ ಸಚಿವ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿಯಿದ್ದು, 2 ಡಜನ್‍ಗೂ ಅಧಿಕ ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಹಳೆಬರಿಗೆ ಕೋಕ್ ಕೊಟ್ಟು ಪಕ್ಷ ಸಂಘಟನೆಗೆ ನಿಯೋಜನೆ ಮಾಡಬೇಕೆಂಬುದು ಕೆಲವರ ಬೇಡಿಕೆಯಾಗಿದೆ.
ಆರ್‍ಎಸ್‍ಎಸ್ ಹಿನ್ನೆಲೆ, ಪ್ರದೇಶವಾರು, ಜಾತಿವಾರು ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ/ಪುನಾರಚನೆ ಮಾಡಬೇಕೆಂಬುದು ಆಕಾಂಕ್ಷಿಗಳ ಒತ್ತಾಸೆಯಾಗಿದೆ.
ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವಧಿ ಮುಗಿಯುತ್ತಿರುವುದರಿಂದ ತೆರವಾಗಲಿರುವ ಈ ಸ್ಥಾನಕ್ಕೆ ನೇಮಕ ಮಾಡುವ ಬಗ್ಗೆ ಪಕ್ಷದ ವರಿಷ್ಠರು ಯಡಿಯೂರಪ್ಪನವರಿಂದ ಅಭಿಪ್ರಾಯ ಪಡೆಯಲಿದ್ದಾರೆ.
ಜೊತೆಗೆ ನಿಗಮಮಂಡಳಿಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕಾತಿ ಹೀಗೆ ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ. ಯಡಿಯೂರಪ್ಪ ಪಕ್ಷದ ಅತ್ಯುನ್ನತ ಸಮಿತಿಯ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಪ್ರಭಾವ ಬೀರಲಿದ್ದಾರೆ.