ಬೆಂಗಳೂರು,ಜ.5- ಮೇಕೆದಾಟು ಯೋಜನೆಗೆ ಆಗ್ರಹಿಸಿ 10 ದಿನಗಳ ಪಾದಯಾತ್ರೆಗೆ ಕಾಂಗ್ರೆಸ್ ಪಡೆ ಮುಂದಾಗಿದೆ. ಈ ಪಾದಯಾತ್ರೆಗೆ ಪ್ರತಿ ಹೆಜ್ಜೆಗೂ ಕೌಂಟರ್ ನೀಡಲು ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ.ಜನವರಿ 9 ರಿಂದ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಆರಂಭಿಸುತ್ತಿದೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಹೊಗೇನಕಲ್‍ನಿಂದ ಬೆಂಗಳೂರುವರೆಗೆ 10 ದಿನಗಳ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.
ಪಾದಯಾತ್ರೆಯುದ್ದಕ್ಕೂ ರಾಜ್ಯ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ತಲುಪಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ.ಕಳೆದ ಬಾರಿ ಅಕ್ರಮ ಗಣಿಗಾರಿಕೆ ಪ್ರಕರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಕೈ ನಾಯಕರಿಗೆ ನಂತರದ ಚುನಾವಣೆಯಲ್ಲಿ ಜನಮನ್ನಣೆ ಸಿಕ್ಕಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಆದರು.
ಆ ಪಾದಯಾತ್ರೆ ವೇಳೆಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಈಗಲೂ ಅಂತಹದ್ದೇ ಸನ್ನಿವೇಶ ನಿರ್ಮಾಣವಾಗುತ್ತಿದೆ. ಆದರೆ ಕಳೆದ ಬಾರಿಯ ತಪ್ಪಿನಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಈಗ ಕಾಂಗ್ರೆಸ್ ಪಾದಯಾತ್ರೆ ಸಫಲವಾಗದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ.
# ಪ್ಲಾನ್ ಎ:
ರಾಜ್ಯದಲ್ಲಿ ಈಗಾಗಲೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ನೈಟ್ ಕಫ್ರ್ಯೂ ಜಾರಿಗೊಳಿಸಲಾಗಿದೆ. ಪಾಸಿಟಿವಿಟಿ ದರ ಹೆಚ್ಚುತ್ತಿದ್ದು, ಇದನ್ನೇ ಮುಂದಿಟ್ಟುಕೊಂಡು ಕಠಿಣ ನಿರ್ಬಂಧಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದೆ.
ಈ ಸಂಬಂಧ ಏಕಾಏಕಿ ನಿರ್ಧಾರ ಕೈಗೊಳ್ಳದೆ ಸರಣಿ ಸಭೆಗಳನ್ನು ನಡೆಸಿ ನಂತರವೇ ನಿರ್ಧಾರ ಪ್ರಕಟಿಸಲು ಮುಂದಾಗಿದೆ.ಎರಡನೇ ಅಲೆ ವೇಳೆ ಲಾಕ್‍ಡೌನ್‍ಗೆ ತರಾತುರಿ ಮಾಡದ ರಾಜ್ಯ ಸರ್ಕಾರ ಏಪ್ರಿಲ್‍ವರೆಗೂ ಕಾದು ನೋಡಿತ್ತು. ಆದರೆ ಈಗ ಜನವರಿಯಲ್ಲೇ ಲಾಕ್ ಡೌನ್ ಚಿಂತನೆ ಮಾಡುತ್ತಿರುವುದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರವಾಗಿದೆ. ಇತ್ತ ಕೋವಿಡ್ ನಿಯಂತ್ರಣದಲ್ಲಿಯೂ ಇರಬೇಕು, ಅತ್ತ ಕಾಂಗ್ರೆಸ್ ಪಾದಯಾತ್ರೆಯೂ ನಡೆಯಬಾರದು ಎನ್ನುವುದು ಕೇಸರಿ ಪಡೆಯ ಲೆಕ್ಕಾಚಾರವಾಗಿದೆ.
# ಪ್ಲಾನ್ ಬಿ:
ಜನವರಿ 7ರಂದು ನಡೆಯುವ ಸಭೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ನಿರ್ಬಂಧ ಹೇರದೇ ಇದ್ದಲ್ಲಿ, ಪ್ರತಿ ಹಂತದಲ್ಲಿಯೂ ಕೌಂಟರ್ ಟಾಂಗ್ ಕೊಡುವ ಟಾಸ್ಕ್ ಅನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರು, ರಾಜ್ಯ ಪದಾಕಾರಿಗಳು ಮೇಕೆದಾಟು ಪಾದಯಾತ್ರೆಗೆ ಪ್ರತಿಯಾಗಿ ಯೋಜನೆ ಕುರಿತು ಜನತೆಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡುವುದು, ಮಾಧ್ಯಮಗೋಷ್ಟಿಗಳನ್ನು ನಡೆಸಿ ವಿವರ ನೀಡುವುದು ಹಾಗೂ ಪಾದಯಾತ್ರೆ ವೇಳೆ ಕಾಂಗ್ರೆಸ್ ನಾಯಕರು ಮಾಡುವ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿ ಸತ್ಯವನ್ನು ಜನರೆದುರು ಇಡಬೇಕು.
ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ರಾಜ್ಯ ಘಟಕದಿಂದ ಸಂದೇಶ ರವಾನಿಸಲಾಗಿದೆ.
# ಆ್ಯಕ್ಟೀವ್ ಆದ ಕೋರ್ ಟೀಂ :
ರಾಜ್ಯ ಘಟಕದ ಸೂಚನೆ ಹೊರಬೀಳುತ್ತಿದ್ದಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಪಕ್ಷದ ಸಂಘಟನಾತ್ಮಕ ಕೋರ್ ಟೀಂ ಫುಲ್ ಆ್ಯಕ್ಟೀವ್ ಆಗಿದೆ. ಕಾಂಗ್ರೆಸ್‍ನ ಪ್ರತಿ ಹೇಳಿಕೆಗೂ ಕೌಂಟರ್ ನೀಡಲು ಶುರು ಮಾಡಿದೆ. ಬಿಜೆಪಿಯ ಅಕೃತ ಟ್ವಿಟ್ಟರ್ ಖಾತೆಯಲ್ಲಿಯೂ ಮೇಕೆದಾಟು ವಿಚಾರಕ್ಕೆಹೆಚ್ಚಿನ ಆದ್ಯತೆ ನೀಡಲಾಗಿದೆ.
