ಬೆಂಗಳೂರು,ಸೆ.29- 2023ರ ವಿಧಾನಸಭಾ ಚುನಾವಣೆಗೆ ಸಿದ್ದತೆ ಆರಂಭಿಸಿರುವ ಬಿಜೆಪಿ ಮುಂದಿನ ಮೂರು ತಿಂಗಳ ಆಕ್ಷನ್ ಪ್ಲಾನ್ ಸಿದ್ಧಪಡಿಸಿಕೊಂಡಿದೆ. ವರ್ಷಾಂತ್ಯದೊಳಗೆ ಆಯ್ದ 104 ವಿಧಾನಸಭಾ ಕ್ಷೇತ್ರ ಪ್ರವಾಸ ಮತ್ತು 7 ಬೃಹತ್ ಸಮಾವೇಶಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವರ್ಚಸ್ಸು ಹೊಂದಿರುವ ನಾಯಕರನ್ನು ಕರೆತರಲು ಹೈಕಮಾಂಡ್ ನಿರ್ಧರಿಸಿದೆ.
150 ಕ್ಷೇತ್ರ ಗೆಲುವಿನ ಗುರಿ ಮುಟ್ಟುವ ಕಾರ್ಯಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕೇಸರಿ ಹವಾ ಸೃಷ್ಟಿಸಲು ಮುಂದಾಗಿದೆ.
ಇದಕ್ಕಾಗಿ ಮೂರು ತಿಂಗಳ ಕಾರ್ಯಯೋಜನೆಯನ್ನು ರಚಿಸಿಕೊಂಡಿದೆ. ಪಕ್ಷಕ್ಕೆ ನೆಲೆ ಇಲ್ಲದ ದೊಡ್ಡಬಳ್ಳಾಪುರದಲ್ಲಿ ನಡೆಸಿದ ಜನೋತ್ಸವ ಸಮಾರಂಭಕ್ಕೆ ಭರ್ಜರಿ ಜನ ಬೆಂಬಲ ವ್ಯಕ್ತವಾದ ಹಿನ್ನೆಲೆ ರಾಜ್ಯದ ಹಲವು ಭಾಗದಲ್ಲಿ ಏಳು ಬೃಹತ್ ಸಮಾವೇಶಗಳನ್ನು ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ರೈತ ಸಮಾವೇಶ ಎಸ್‍ಸಿ ಸಮಾವೇಶ, ಒಬಿಸಿ ಸಮಾವೇಶ, ಯುವ ಸಮಾವೇಶ, ಮಹಿಳಾ ಸಮಾವೇಶ, ಎಸ್‍ಟಿ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಿದ್ದು, ಆಯಾ ಮೋರ್ಚಾದ ರಾಜ್ಯಾಧ್ಯಕ್ಷರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಈ ಏಳು ಸಮಾವೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆಸಲು ನಿರ್ಧರಿಸಲಾಗಿದ್ದು, ಈ ನಾಯಕರು ನೀಡುವ ಸಮಯ ನೋಡಿ ಸಮಾವೇಶದ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ.
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳಿಗೆ ಸಮಾವೇಶವನ್ನು ಸಂಘಟಿಸುವ ಹೊಣೆ ನೀಡಲಾಗಿದೆ.
ರಾಜ್ಯದ 104 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯ ಬಿಜೆಪಿಯ ಎರಡು ತಂಡಗಳು ಪ್ರವಾಸ ಕೈಗೊಳ್ಳಲಿವೆ. ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನೇತೃತ್ವದ ಒಂದು ತಂಡ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮತ್ತೊಂದು ತಂಡ ಪ್ರವಾಸ ಕೈಗೊಳ್ಳಲಿದೆ.
ಎರಡು ತಂಡಗಳು 104 ಕ್ಷೇತ್ರಗಳ ಪ್ರವಾಸದಲ್ಲಿ ಫಲಾನುಭವಿಗಳ ಸಮಾವೇಶ, ಎಸ್‍ಸಿ, ಎಸ್‍ಟಿ, ಒಬಿಸಿ ಕಾರ್ಯಕರ್ತರ ಮನೆಯಲ್ಲಿ ಉಪಹಾರ ಮತ್ತು ಅದೇ ಪರಿಸರದಲ್ಲಿ ಸಭೆ ನಡೆಸಿ ಸರ್ಕಾರದ ಸಾಧನೆಗಳು, ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯ ಮಠಮಂದಿರಗಳಿಗೂ ಭೇಟಿ ನೀಡುವ ಕಾರ್ಯಕ್ರಮವನ್ನೂ ಪ್ರವಾಸದಲ್ಲಿ ಸೇರಿಸಲಾಗಿದೆ.
ಹುಬ್ಬಳ್ಳಿ, ಬಳ್ಳಾರಿ, ಮೈಸೂರು, ಶಿವಮೊಗ್ಗ, ಬೆಂಗಳೂರು ಸೇರಿ ಪಾಲಿಕೆ ಇರುವ ಕಡೆಗಳಲ್ಲಿ ಪ್ರವಾಸ ನಡೆಯಲಿದ್ದು, ಪ್ರವಾಸದುದ್ದಕ್ಕೂ ಬೂತ್, ಶಕ್ತಿ ಕೇಂದ್ರಗಳ, ಚುನಾಯಿತ ಪ್ರತಿನಿಗಳ ಸಭೆ ನಡೆಸಲಿದೆ.
ಕೋರ್ ಕಮಿಟಿಯ 16 ಸದಸ್ಯರು ರಾಜ್ಯ ಪ್ರಭಾರಿ ಅರುಣ್ ಸಿಂಗ್, ಸಹ ಪ್ರಭಾರಿ ಅರುಣಾ ಕೂಡ ರಾಜ್ಯ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯಾ ವ್ಯಾಪ್ತಿಯ ಶಾಸಕರು, ಸಂಸದರು, ಸಚಿವರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ.