ಬಿಜೆಪಿಯಲ್ಲಿ ಶೀಘ್ರದಲ್ಲೇ ಭರ್ಜರಿ ಸರ್ಜರಿ : ಅಧ್ಯಕ್ಷರ ಬದಲಾವಣೆ-ಸಂಪುಟ ವಿಸ್ತರಣೆ

Social Share

ಬೆಂಗಳೂರು,ಆ.26- ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಅಮೂಲಾಗ್ರ ಬದಲಾವಣೆ ಮಾಡಲು ಮುಂದಾಗಿರುವ ಬಿಜೆಪಿ ಶೀಘ್ರದಲ್ಲೇ ರಾಜ್ಯಕ್ಕೆ ಹೊಸ ಸಾರಥಿಯನ್ನು ನೇಮಿಸುವ ಸಾಧ್ಯತೆಯಿದೆ. ನಿನ್ನೆಯಷ್ಟೇ ಉತ್ತರಪ್ರದೇಶ ಮತ್ತು ತ್ರಿಪುರ ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ಬಿಜೆಪಿ ವರಿಷ್ಠರು ನೇಮಿಸಿದ್ದರು. ಇದರ ಬೆನಲ್ಲೇ ಅಧಿಕಾರಾವಧಿ ಮುಗಿದಿರುವ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಸಂಭವವಿದೆ.

ಕರ್ನಾಟಕದಲ್ಲಿ ಹಾಲಿ ಅಧ್ಯಕ್ಷ ನಳೀನ್‍ಕುಮಾರ್ ಅಧಿಕಾರ ಅವಧಿ ಈಗಾಗಲೇ ಮುಗಿದಿದ್ದು, ಯಾವುದೇ ಕ್ಷಣದಲ್ಲೂ ಹೊಸ ಅಧ್ಯಕ್ಷರ ಆಯ್ಕೆ ಘೋಷಣೆಯಾಗಬಹುದೆಂದು ಪಕ್ಷದ ಮೂಲಗಳು ತಿಳಿಸಿವೆ. ಮೂರು ವರ್ಷದ ಅವಧಿ ಮುಗಿದ ನಂತರ ಸಹಜವಾಗಿ ಹೊಸಬರ ನೇಮಕವಾಗಲಿದೆ ಎಂದು ಯಡಿಯೂರಪ್ಪ ಆದಿಯಾಗಿ ಎಲ್ಲಾ ನಾಯಕರು ಹೇಳುತ್ತಿದ್ದರೆ ನನ್ನ ಅವಧಿ ಮುಗಿದಿಲ್ಲ ಎಂದು ಕಟೀಲ್ ಹೇಳುತ್ತಿದ್ದಾರೆ. ಈ ಎಲ್ಲದರ ನಡುವೆ ಹಲವು ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಗೆ ಬಂದಿದ್ದು ಚರ್ಚೆಯ ಕಾವು ಹೆಚ್ಚುವಂತೆ ಮಾಡಿದೆ.

2019ರ ಆಗಸ್ಟ್ 20ರಂದು ನಳೀನ್‍ಕುಮಾರ್ ಕಟೀಲ್ ಅವರನ್ನು ರಾಜಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಹೈಕಮಾಂಡ್ ಆದೇಶ ಹೊರಡಿಸಿತ್ತು. ಆದರೆ ಪಕ್ಷದ ನಿಯಮದಂತೆ ಚುನಾಯಿತ ಅಧ್ಯಕ್ಷರಾಗಿ ಕಟೀಲ್ ಆಯ್ಕೆಯಾಗಿದ್ದು, 2020ರ ಜನವರಿ 16ರಂದು. ಅಂದು ನಡೆದ ರಾಜ್ಯಾಧ್ಯಕ್ಷರ ಚುನಾವಣೆಗೆ ಕಟೀಲ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವರ ಆಯ್ಕೆಯನ್ನು ಅವಿರೋಧವಾಗಿ ಪ್ರಕಟಿಸಲಾಗಿತ್ತು.

ಅಂದೇ ಅರಮನೆ ಮೈದಾನದಲ್ಲಿ ಸಮಾರಂಭ ನಡೆಸಿ ಮುಂದಿನ ಮೂರು ವರ್ಷ ಕಟೀಲ್ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ, ಪಕ್ಷವನ್ನು ಕಟ್ಟುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಘೋಷಿಸಿದ್ದರು.

ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಅವ ಆ.28ಕ್ಕೆ ಮುಗಿಯುತಿ್ತ್ದು, ನಳೀನ್‍ಕುಮಾರ್ ಕಟೀಲ್ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಸಬೇಕೋ, ಬೇಡವೋ ಎಂಬುದರ ಬಗ್ಗೆಯೂ ಬಿಜೆಪಿ ಹೈಕಮಾಂಡ್ ಇನ್ನು ಸ್ಪಷ್ಟನೆ ಕೊಟ್ಟಿಲ್ಲ. ಇದರ ನಡುವೆ ಸಚಿವರ ಸಂಪುಟ ವಿಸ್ತರಣೆ ಬಗ್ಗೆಯೂ ಹೈಕಮಾಂಡ್ ಮೌನವಾಗಿದೆ.

ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಹಾಗೂ ಸೆ.11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಂತರ ಹೈಕಮಾಂಡ್‍ನಿಂದ ಸರ್ಜರಿ ನಡೆಯಬಹುದಾ ಎಂಬ ಕುತೂಹಲ ಹೆಚ್ಚಾಗಿದೆ.

ಚುನಾವಣಾ ವರ್ಷ ಆಗಿರುವುದರಿಂದಾಗಿ ಕಾರ್ಯಕರ್ತರು, ನಾಯಕರಲ್ಲಿ ಗೊಂದಲ ಇರಬಾರದೆಂದು ಹೈಕಮಾಂಡ್‍ಗೆ ಸಂಘದ ಕೆಲ ಪ್ರಮುಖರು, ಬಿಜೆಪಿಯ ಕೆಲ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ನಿಯಮದಂತೆ ಆ.28ಕ್ಕೆ ಕಟೀಲ್ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಪಕ್ಷಕ್ಕೆ ಅಗತ್ಯವಿದ್ದರೆ ಅವ ವಿಸ್ತರಿಸಬಹುದು ಅಥವಾ ಪುನರ್ ಆಯ್ಕೆ ಮಾಡಬಹುದು. ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಸಾಧ್ಯತೆಗಳಿವೆ.

ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಮೂವರ ಹೆಸರುಗಳು ಕೇಳಿಬರುತ್ತಿವೆ. ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಹಾಗೂ ಸಚಿವ ಸುನಿಲ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಚುನಾವಣಾ ದೃಷ್ಟಿಯಿಂದ ರಾಜಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥರೊಬ್ಬರ ಆಯ್ಕೆ ಜೊತೆಗೆ ಪ್ರಧಾನ ಕಾರ್ಯದರ್ಶಿ ಮಟ್ಟದ ಪದಾಧಿಕಾರಿಗಳಾಗಿ ಕೆಲವರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೀತಿದೆ.

ಇದರೊಂದಿಗೆ ಆಡಳಿತಕ್ಕೆ ಚುರುಕು ಮುಟ್ಟಿಸಲು ಬೊಮ್ಮಾಯಿ ಸರ್ಕಾರದಲ್ಲೂ ಕೆಲ ಬದಲಾವಣೆ ನಡೆಯಬಹುದು. ಐದು ಖಾಲಿ ಸಚಿವ ಸ್ಥಾನಗಳ ಪೈಕಿ ನಾಲ್ಕು ಭರ್ತಿ ಮಾಡಿಕೊಳ್ಳುವ ಮೂಲಕ ಸಂಪುಟ ವಿಸ್ತರಣೆಗೆ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

ಸಿ.ಟಿ ರವಿ ಹಿಂದುತ್ವವಾದಿ, ಪಕ್ಷವನ್ನು ಮೊದಲಿನಿಂದಲೇ ಸಮರ್ಥಿಸಿಕೊಂಡು ಬರುತ್ತಿರುವ ನಾಯಕ, ಪಕ್ಷದ ಅಜೆಂಡಾದಂತೆ ನಡೆದುಕೊಳ್ಳುವ ಕಲೆ ಕರಗತವಾಗಿದೆ. ಹಿಂದುತ್ವ ಅಜೆಂಡಾದ ಮಾಲ್ ಇಮೇಜ್ ಇರುವ ಕಾರಣಕ್ಕೆ ಸಿ.ಟಿ ರವಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಡಿಯೂರಪ್ಪ ಆಪ್ತ ಬಳಗದಲ್ಲಿದ್ದವರು. ಮಹಿಳೆಗೆ ಅವಕಾಶ ಕಲ್ಪಿಸಬೇಕು ಎಂದು ಪರಿಗಣಿಸಿದಲ್ಲಿ ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ ಅನುಭವಿ ರಾಜಕಾರಣಿ ಆಗಿದ್ದಾರೆ. ಹಾಗಾಗಿ ಅವರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ಅತ್ಯುತ್ತಮ ಸಂಘಟನಾ ಚತುರನಾಗಿರುವ ಕಾರಣಕ್ಕೆ ಅರವಿಂದ ಲಿಂಬಾವಳಿ ಅವರಿಗೆ ಹೈಕಮಾಂಡ್ ಮಣೆ ಹಾಕಲಿದೆ ಎನ್ನಲಾಗುತ್ತಿದೆ. ಕಟೀಲ್ ನೇಮಕದ ಸಮಯದಲ್ಲೇ ಲಿಂಬಾವಳಿ ಹೆಸರು ಕೇಳಿಬಂದಿತ್ತು. ಹಾಗಾಗಿ ಅವರಿಗೆ ಈಗ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಇನ್ನು ಸರಳ ಸಜ್ಜನಿಕ, ಸಂಘದ ಹಿನ್ನೆಲೆ, ಸುಸಂಸ್ಕೃತ ರಾಜಕಾರಣಿಯಾಗಿ ಕ್ಲೀನ್ ಇಮೇಜ್ ಇರಿಸಿಕೊಂಡಿರುವ ಕಾರಣಕ್ಕೆ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಸಚಿವ ಸುನೀಲ್ ಕುಮಾರ್ ಅವರನ್ನು ಪರಿಗಣಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಚಿವ ಸುನೀಲ್ ಕುಮಾರ್ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧ ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ರಾಜ್ಯಾಧ್ಯಕ್ಷರಾಗಲು ಹತ್ತಾರು ಜನರಿಗೆ ಯೋಗ್ಯತೆ ಇದೆ. ಒಂದು ವೇಳೆ ನನಗೆ ನೀಡಿದರೆ ಜವಾಬ್ದಾರಿ ನಿರ್ವಹಿಸಲು ಸಿದ್ಧನಿದ್ದೇನೆ, ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಟಿಕೆಟ್ ನೀಡಿತು. ಗೆದ್ದೆ ಹಾಗೆಯೇ ಈಗ ರಾಜ್ಯಾಧ್ಯಕ್ಷರಾಗಲು ಸೂಚಿಸಿದರೆ ಅದನ್ನು ಪಾಲಿಸುತ್ತೇನೆ ಎನ್ನು ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಹ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.

Articles You Might Like

Share This Article