ಕಟೀಲ್ ಆಡಿಯೋ ಹಿಂದೆ ಕಾಣದ ಕೈಗಳ ಕೈವಾಡ..?

ಬೆಂಗಳೂರು,ಜು.19- ಬಿಜೆಪಿ ರಾಜ್ಯಧ್ಯಕ್ಷ ನಳೀನ್‍ಕುಮಾರ್ ಕಟೀಲು ಅವರದ್ದೇ ಎನ್ನಲಾದ ಆಡಿಯೋ ವೈರಲ್ ಆಗಿರುವುದು ಇದೀಗ ಆಡಳಿತಾರೂಢ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ. ಇದ್ದ ಇಬ್ಬರಲ್ಲಿ ಕದ್ದವರ್ಯಾರು ಎನ್ನುವಂತೆ ಸ್ವತಃ ರಾಜ್ಯಧ್ಯಕ್ಷರು ಮಾತನಾಡಿರುವ ಆಡಿಯೋ ವೈರಲ್ ಮಾಡಿರುವುದರಿಂದ ಸಂಶಯದ ಮುಳ್ಳು ಅನೇಕರನ್ನು ಸುತ್ತಿಕೊಂಡಿದೆ.

ಸಾಮಾನ್ಯವಾಗಿ ಯಾವತ್ತೂ ಯಾವುದೇ ವಿವಾದಕ್ಕೆ ಸಿಲುಕದೆ ಸದಾ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ದೆಹಲಿ ನಾಯಕರ ಅಣತಿಯಂತೆ ಕೆಲಸ ಮಾಡುತ್ತಿದ್ದ ಕಟೀಲು ಅವರ ಅಡಿಯೋ ಬಹಿರಂಗವಾಗಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ. ಇದೀಗ ಬಿಜೆಪಿಯಲ್ಲೇ ಒಬ್ಬರ ಬಗ್ಗೆ ಇನ್ನೊಬ್ಬರು ಅನುಮಾನಪಡುವ ವಾತಾವರಣ ಸೃಷ್ಟಿಯಾಗಿದ್ದು, ಯಾರು ಯಾರನ್ನೂ ನಂಬದಂತಹ ಸ್ಥಿತಿ ಬಂದಿದೆ. ಪಕ್ಷದ ಮೂಲಗಳ ಪ್ರಕಾರ ನಳೀನ್‍ಕುಮಾರ್ ಕಟೀಲ್ ಮುಖಕ್ಕೆ ಮಸಿ ಬಳಿಯುವ ದುರದ್ದೇಶದಿಂದಲೇ ಅವರ ವಿರೋಧಿ ಬಣಗಳು ಇದನ್ನು ಹರಿಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಣದತ್ತ ದೂರುತ್ತಿದ್ದಾರೆ.

ಆದರೆ ಸಿಎಂ ಆಪ್ತ ಬಳಗ ಇದನ್ನು ನಿರಾಕರಿಸಿದ್ದು, ಬಿಜೆಪಿ ವಲಯದಿಂದಲೇ ಹರಿಬಿಡಲಾಗಿದ್ದು, ಪರೋಕ್ಷವಾಗಿ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಸೇರಿದಂತೆ ಸಂಘಪರಿವಾರದ ನಿಷ್ಠರಾಗಿರುವವರನ್ನೇ ಗುರಿಯಾಗಿಟ್ಟುಕೊಂಡು ಈ ದಾಳ ಉರುಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯವನ್ನು ಪ್ರತಿನಿಧಿಸುವ ದೆಹಲಿಯ ಪ್ರಭಾವಿ ನಾಯಕರ ಸೂಚನೆಯಂತೆಯೇ ಆಡಿಯೋವನ್ನು ಮಾಧ್ಯಮಗಳಲ್ಲಿ ಸೋರಿಕೆಯಾಗುವಂತೆ ಮಾಡಲಾಗಿದೆ ಎನ್ನಲಾಗುತ್ತಿದೆ.

# ಕಟೀಲ್ ಹೇಳಿದ್ದೇನು?:
ನಳಿನ್ ಕುಮಾರ್ ಕಟೀಲ್ ಅವರದೆನ್ನಲಾದ ಸ್ಫೋಟಕ ಆಡಿಯೋ ವೈರಲ್‍ಈ ಮೂಲಕ ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್ ದೊರೆತಿದೆ. ನಳೀನ್‍ಕುಮಾರ್ ಅವರು ತಮ್ಮ ಆಪ್ತರೊಬ್ಬರ ಬಳಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಮಾತುಕತೆಯಲ್ಲಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ಕೂಡ ದೊರೆತಿದೆ.

ತುಳುವಿನಲ್ಲಿ ನಡೆಸಿರುವ ಈ ಸಂಭಾಷಣೆಯಲ್ಲಿ, ಯಾರಿಗೂ ಹೇಳೋದು ಬೇಡ ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ತಂಡವನ್ನೇ ತೆಗೆದು ಹಾಕಲಾಗುತ್ತದೆ. ಹೊಸ ತಂಡ ರಚಿಸಲಾಗುತ್ತದೆ. ಏನೂ ಹೆದರಬೇಡಿ, ನಾವಿದ್ದೇವೆ. ಏನಾದರೂ, ಎಲ್ಲಾ ಇನ್ನೂ ನಮ್ಮ ಕೈಯಲ್ಲಿದೆ. ಮೂರು ಹೆಸರಿದೆ, ಯಾವುದೂ ಆಗಲೂ ಸಾಧ್ಯವಿದೆ. ಇಲ್ಲ ಇಲ್ಲಿಯವರನ್ನು(ಕರಾವಳಿ) ಯಾರನ್ನೂ ಮಾಡೋಲ್ಲ. ಡೆಲ್ಲಿಯಿಂದಲೇ ಹಾಕುತ್ತಾರೆ ಎಂದು ಕಟೀಲ್ ಅವರೇ ಮಾತನಾಡಿದ್ದಾರೆ ಎನ್ನಲಾದ ತುಳು ಆಡಿಯೋದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಸೂಚ್ಯವಾಗಿ ಹೇಳಿದಂತಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಘಟಿಸಲಿವೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.

ವೈರಲ್ ಆಗಿರುವ ಆಡಿಯೋ ತಮ್ಮದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದು, ಆಡಿಯೋ ಕುರಿತು ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ಆಡಿಯೋ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವೈರಲ್ ಆಗುತ್ತಿರುವ ಆಡಿಯೋದಲ್ಲಿ ಇರುವ ದನಿ ನನ್ನದಲ್ಲ, ಆ ಆಡಿಯೋವನ್ನು ಯಾರೋ ಬೇಕೆಂದೇ ಮಾಡಿದ್ದಾರೆ. ಈ ಆಡಿಯೋ ಬಗ್ಗೆ ಪೂರ್ತಿ ತನಿಖೆಯಾಗಲಿ ಎಂದಿದ್ದಾರೆ.

ಈಗಲೇ ನಾನು ಸಿಎಂ ಯಡಿಯೂರಪ್ಪ ಅವರಿಗೆ ತನಿಖೆ ಕುರಿತು ಪತ್ರ ಬರೆಯುತ್ತೇನೆ ಎಂದರು.ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಪಕ್ಷದಲ್ಲಿ ಈವರೆಗೂ ಚರ್ಚೆಯಾಗಿಲ್ಲ. ಚರ್ಚೆ ಆಗದ ವಿಷಯದ ಕುರಿತು ಹೇಗೆ ಮಾತನಾಡಲು ಸಾಧ್ಯ? ಯಾರೋ ದುರುದ್ದೇಶದಿಂದ ಇದನ್ನೆಲ್ಲಾ ಮಾಡಿ ವೈರಲ್ ಮಾಡುತ್ತಿದ್ದಾರೆ ಎಂದು ಕಟೀಲ್ ಕಿಡಿಕಾರಿದ್ದಾರೆ.