ನವದೆಹಲಿ, ಫೆ.8- ಲವ್ ಜಿಹಾದ್‍ನಲ್ಲಿ ಭಾಗಿಯಾದವರಿಗೆ ಹತ್ತು ವರ್ಷ ಶಿಕ್ಷೆ, ಮಹಿಳೆಯರಿಗೆ ಉಚಿತ ದ್ವಿಚಕ್ರ ವಾಹನ, ವರ್ಷಕ್ಕೆರೆಡು ಉಚಿತ ಸಿಲಿಂಡರ್ ಸೇರಿ ಹಲವು ಭರವಸೆಗಳ ಲೋಕಕಲ್ಯಾಣ ಸಂಕಲ್ಪ ಪತ್ರ 2022ನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭೆಗೆ ಏಳು ಹಂತಗಳಲ್ಲಿ ನಡೆಯುತ್ತಿರುವ ಚುನಾವಣೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಲವ್ ಜಿಹಾದ್‍ನ್ನು ಪ್ರಮುಖವಾಗಿ ಪ್ರಸ್ತಾಪಿಸಿದೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ನಲ್ಲಿ ತೊಡಗಿರುವ ತಪ್ಪಿತಸ್ಥರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಒಂದು ವರ್ಷ ಶಿಕ್ಷೆ ವಿಧಿಸುವ ಕಾನೂನು ರೂಪಿಸಲಾಗುವುದು ಎಂದು ಹೇಳಲಾಗಿದೆ.
ಈ ವೇಳೆ ಮಾತನಾಡಿರುವ ಅಮಿತ್ ಶಾ ಅವರು, ಉಜ್ವಲ ಯೋಜನೆ ಅಡಿಯಲ್ಲಿ ಹೊಳಿ ಮತ್ತು ದೀಪಾವಳಿ ಸಂದರ್ಭಕ್ಕೆ ಎರಡು ಉಚಿತ ಎಲ್‍ಪಿಜಿ ಸಿಲಿಂಡರ್‍ಗಳನ್ನು ನೀಡಲಾಗುವುದು. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಸೌಲಭ್ಯ ಹಾಗೂ ಪ್ರತಿಭಾವಂತ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ದ್ವಿಚಕ್ರ ವಾಹನಗಳನ್ನು ನೀಡಲಾಗುವುದು.
ಮುಂದಿನ 5 ವರ್ಷಗಳಲ್ಲಿ ಎಲ್ಲ ರೈತರಿಗೆ ಉಚಿತ ನೀರಾವರಿ ಸೌಲಭ್ಯ ಕಲ್ಪಿಸಿ, 14 ದಿನಗಳಲ್ಲಿ ಕಬ್ಬು ಬೆಳೆಗಾರರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದು ಕೇವಲ ಘೋಷಣಾ ಪತ್ರವಲ್ಲ, ಹಿಂದಿನ ಉತ್ತರ ಪ್ರದೇಶ ಸರ್ಕಾರ ಪ್ರಣಾಳಿಕೆಯಲ್ಲಿ 212 ಭರವಸೆಗಳನ್ನು ನೀಡಿ 92ನ್ನು ಮಾತ್ರ ಪೂರೈಸಲಾಗಿದೆ ಎಂದು ಸಮಾಜವಾದಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಿಜೆಪಿ ಹೇಳಿದ್ದನ್ನು ಮಾಡುತ್ತದೆ.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜನ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಲತಾ ಮಂಗೇಶ್ಕರ್ ಅವರ ಪರಂಪರೆಯನ್ನು ಗೌರವಿಸಲು ಲತಾ ಮಂಗೇಶ್ಕರ್ ಪರ್ಫಾರ್ಮಿಂಗ್ ಆಟ್ರ್ಸ್ ಅಕಾಡೆಮಿಯನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.
