ಬೆಂಗಳೂರು,ಆ.23-ಬಿಜೆಪಿ ಧರ್ಮಾಧಾರಿತವಾಗಿ ರಾಜಕಾರಣ ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ, ಸರ್ಕಾರ ನಡೆಸುವ ಬಿಜೆಪಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಅದರ ಆಧಾರದ ಮೇಲೆ ಜನರಲ್ಲಿ ಮತ ಕೇಳಬೇಕು. ಅದನ್ನು ಬಿಟ್ಟು ಮಾಂಸಾಹಾರ, ದೇವರು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಇದನ್ನು ಮರೆಮಾಚಲು ಸಿದ್ದರಾಮಯ್ಯ ಅವರ ಮಾಂಸಾಹಾರವನ್ನು ವಿವಾದ ಮಾಡುವ ಯತ್ನ ಮಾಡಿದ್ದಾರೆ. ದೇಶದಲ್ಲಿ ಮಾಂಸಾಹಾರ ನಿಷೇಧವಿಲ್ಲ. ಹಲವಾರು ದೇವಸ್ಥಾನಗಳಲ್ಲಿ ಮಾಂಸಾಹಾರವನ್ನೇ ನೈವೇದ್ಯ ಮಾಡುವುದಿದೆ. ಬಿಜೆಪಿ ಮಾಂಸಾಹಾರವನ್ನು ಅವಹೇಳನಮಾಡುವ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ದೂರಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ನಾಗ್ಪುರದ ಒಂದು ಸಮುದಾಯದ ವಿಚಾರಧಾರೆಗಳನ್ನೇ ದೇಶದ ವಿಷಯಗಳು ಎಂದು ಬಿಂಬಿಸುವ ಯತ್ನ ನಡೆದಿದೆ. ಸಸ್ಯಾಹಾರ ಸಮುದಾಯದಲ್ಲೂ ಮೀನು ಹಾಗೂ ಇತರ ಪದಾರ್ಥಗಳನ್ನು ಸೇವಿಸುವ ಪದ್ಧತಿ ರೂಢಿಯಲ್ಲಿದೆ. ತಿರುಪತಿ ತಿಮ್ಮಪ್ಪ ದೇವಸ್ಥಾನ ಭಕ್ತರು ಶ್ರಾವಣ ಮಾಸದಲ್ಲಿ ಮಾಂಸಾಹಾರದೊಂದಿಗೆ ಪೂಜೆ ಮಾಡುವುದಿದೆ ಎಂದು ಹೇಳಿದರು.
ಬಿಜೆಪಿಗೆ ತಾಕತ್ತಿದ್ದರೆ ಮಾಂಸಾಹಾರಿಗಳ ಮತಗಳು ನಮಗೆ ಬೇಡ ಎಂದು ಘೋಷಣೆ ಮಾಡಲಿ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅನಗತ್ಯ ವಿವಾದಗಳನ್ನು ಕೆಣಕಿ ಜನರ ನೆಮ್ಮದಿ ಹಾಳು ಮಾಡುತ್ತೀರಾ ? ಅನಗತ್ಯ ವಿವಾದಗಳ ಮೂಲಕ ಸರ್ಕಾರವೇ ಶಾಂತಿ ಭಂಗ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮೇಯರ್ ರಾಮಚಂದ್ರಪ್ಪ ಮಾತನಾಡಿ, ಚುನಾವಣೆ ಸಂದರ್ಭಗಳಲ್ಲಿ ಬಿಜೆಪಿಯವರು ಗಿಮಿಕ್‍ಗಳನ್ನು ಮಾಡುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ದೇವರು, ಮೆರವಣಿಗೆ, ಧರ್ಮ ಯಾವುದಕ್ಕೂ ಅವರು ಬೆಲೆ ಕೊಡುವುದಿಲ್ಲ ಎಂದು ಆರೋಪಿಸಿದರು.
ಕೇರಳದಲ್ಲಿ ಚುನಾವಣೆ ವೇಳೆ ಅಯ್ಯಪ್ಪನ ವಿವಾದ ಸೃಷ್ಟಿಸಿದರು. ತಮಿಳುನಾಡಿನಲ್ಲಿ ಮುರುಗನ್ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಯತ್ನ ಮಾಡಿದರು. ಆಂಧ್ರಪ್ರದೇಶದಲ್ಲಿ ಮಹಾಲಕ್ಷ್ಮಿ ಮೆರವಣಿಗೆ ಮಾಡಿದರು. ಕರ್ನಾಟಕದಲ್ಲಿ ಎರಡೆರಡು ಬಾರಿ ಭಾವನಾತ್ಮಕ ವಿಚಾರಗಳನ್ನು ಕೆಣಕಿದರೂ ಚಾಮುಂಡೇಶ್ವರಿ ಕೈ ಹಿಡಿಯಲಿಲ್ಲ. ಮಹಾರಾಷ್ಟ್ರದಲ್ಲಿ ಪಾಂಡುರಂಗ ಇವರಿಗೆ ಸಹಾಯ ಮಾಡಲಿಲ್ಲ. ಪಂಜಾಬ್‍ನಲ್ಲಿ ಗುರುನಾನಕ್ ಹೆಸರಿಟ್ಟುಕೊಂಡರೂ ಲಾಭವಾಗಲಿಲ್ಲ. ಈ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವರ ಹೆಸರಿನಲ್ಲಿ ಗಲಾಟೆ ಮಾಡಿದ್ದಾರೆ. ನಂತರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದರು.
ಕಾರ್ಯಕರ್ತರಿಗೆ ಗೂಂಡಾಗಿರಿ ಹೇಳಿಕೊಡುವುದನ್ನು ಬಿಟ್ಟು ಸದ್ಬುದ್ದಿಯನ್ನು ಕಲಿಸಿಕೊಡಲಿ ಎಂದು ಅವರು ಒತ್ತಾಯಿಸಿದರು.