ಬೆಂಗಳೂರು,ಜು.14- ಮುಂಬರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ತಂತ್ರಗಾರಿಕೆ ಹೆಣೆಯುವ ಸಂಬಂಧ ಇಂದು ಸಂಜೆ ಬೆಂಗಳೂರಿನ ಹೊರವಲಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರು ಹಾಗೂ ಸಂಘ ಪರಿವಾರದ ಮುಖಂಡರನ್ನು ಒಳಗೊಂಡ ಮಹತ್ವದ ಚಿಂತನ-ಮಂಥನ ಸಭೆ ನಡೆಯಲಿದೆ.
ಬೆಂಗಳೂರಿನ ಹೊರವಲಯದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿ ಆಯ್ದ ಕೆಲವು ನಾಯಕರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೊರತುಪಡಿಸಿ ಅಧಿಕೃತವಾಗಿ ಮತ್ತೆ ಯಾರು ಪಾಲ್ಗೊಳ್ಳಲಿದ್ದಾರೆ ಎನ್ನುವುದನ್ನು ಗೌಪ್ಯವಾಗಿಡಲಾಗಿದೆ.
ಸಂಜೆ ಎಲ್ಲ ನಾಯಕರು ಬೆಂಗಳೂರು ಹೊರ ವಲಯದ ರೆಸಾರ್ಟ್‍ಗೆ ತೆರಳಿ ಅಲ್ಲಿಯೇ ಸಭೆ ನಡೆಸಿ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಿಗ್ಗೆಯಿಂದ ಸಂಜೆವರೆಗೂ ಸುದೀರ್ಘ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ನಂದಿಬೆಟ್ಟದಲ್ಲಿ ಸಭೆ ನಡೆಯಬಹುದು. ಈ ಚಿಂತನ ಮಂಥನ ಕಾರ್ಯಕ್ರಮದ ಸಂದರ್ಭದಲ್ಲಿ ಆರ್‍ಎಸ್‍ಎಸ್ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 2017ರಲ್ಲಿ ಚುನಾವಣೆಗೂ ವರ್ಷದ ಮೊದಲು ಬಿಜೆಪಿ ಹೈಕಮಾಂಡ್ ನಾಯಕರು, ಆರ್‍ಎಸ್‍ಎಸ್ ನಾಯಕರು, ರಾಜ್ಯ ನಾಯಕರ ಮಹತ್ವದ ಗೌಪ್ಯ ಸಭೆ ನಡೆದಿತ್ತು. ಈಗಲೂ ಅಂತಹ ಸಭೆ ಆಯೋಜನೆಗೂ ಮೊದಲು ಪೂರ್ವಭಾವಿಯಾಗಿ ಸಭೆ ನಡೆಯಲಿದೆ.
ಇದೊಂದು ರೀತಿಯಲ್ಲಿ ಮುಂದಿನ ಚುನಾವಣೆಗೆ ಪರೋಕ್ಷವಾಗಿ ಸಿದ್ಧತೆ ಆರಂಭಿಸಿದಂತೆ. ಚುನಾವಣೆ ಎದುರಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಅಂತಿಮಗೊಳಿಸಿ ಅನುಷ್ಠಾನಗೊಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಸಭೆಯ ಬಳಿಕ ರಾಜ್ಯ ಬಿಜೆಪಿ ಈಗಿರುವ ಸಣ್ಣ ಪುಟ್ಟಲೋಪದೋಷಗಳನ್ನು ನಿವಾರಿಸಿಕೊಂಡು ಚುನಾವಣೆಯತ್ತ ಗಂಭೀರವಾಗಿ ಹೆಜ್ಜೆ ಇಡಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಯ ಪರಾಮರ್ಶೆ ನಡೆಸುವುದರ ಜೊತೆಗೆ ಚುನಾವಣೆ ಉದ್ದೇಶದಿಂದ ಆಡಳಿತದಲ್ಲಿ ಏನೇನು ಸುಧಾರಣೆ ತರಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ವಿಸ್ತತ ಚರ್ಚೆ ನಡೆಯಲಿದೆ. ಆಡಳಿತವನ್ನು ಇನ್ನಷ್ಟುಜನಪರವನ್ನಾಗಿಸುವ ದಿಕ್ಕಿನಲ್ಲಿ ಸಂಘ ಪರಿವಾರದ ಮುಖಂಡರು ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.
ಈ ಸಭೆಯ ಬಳಿಕ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ನಿಗಮ-ಮಂಡಳಿಗಳ ನೇಮಕ ಪ್ರಕ್ರಿಯೆಗೂ ಚಾಲನೆ ಸಿಗುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧಿಸಿದಂತೆ ಮೂರು ವರ್ಷ ಅವ ಪೂರೈಸಿರುವ ನಿಗಮ-ಮಂಡಳಿಗಳ ಅಧ್ಯಕ್ಷರ ಪೈಕಿ ಕೆಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆಯೂ ಈ ಸಭೆಯ ನಂತರ ಸ್ಪಷ್ಟಚಿತ್ರಣ ಹೊರಬೀಳುವ ಸಾಧ್ಯತೆಯಿದೆ.