ಬಿಜೆಪಿ ಚುನಾವಣಾ ರಣಕಹಳೆ : ಬೊಮ್ಮಾಯಿ, ಬಿಎಸ್ವೈ ನೇತೃತ್ವದಲ್ಲಿ ಸಂಘಟನಾ ಪ್ರವಾಸ

Social Share

ಬೆಂಗಳೂರು,ಅ.6-ರಾಜ್ಯದಲ್ಲಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ರಣತಂತ್ರ ರೂಪಿಸುತ್ತಿರುವ ಆಡಳಿತರೂಡ ಬಿಜೆಪಿ, ಅ. 11 ರಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಾದ್ಯಂತ ಸಂಘಟನಾ ಪ್ರವಾಸ ನಡೆಸುವ ಮೂಲಕ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ.

ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಬೀದರ್, ಯಾದಗಿರಿ, ಕಲಬುರುಗಿ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಹುಬ್ಬಳ್ಳಿ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗಾ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ . ವಿಜಯಪುರ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಸಂಘಟನಾ ಪ್ರವಾಸ ನಡೆಸಿ ಎರಡು ಇಲ್ಲವೇ ಮೂರು ಜಿಲ್ಲೆಗಳಿಗೆ ಒಂದರಂತೆ ಬೃಹತ್ ಸಮಾವೇಶಗಳನ್ನು ನಡೆಸಲು ಉದ್ದೇಶಿಸಿದೆ.

ನಾಳೆ ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯ ನಂತರ ರಾಜ್ಯ ಪ್ರವಾಸದ ಅಧಿಕೃತ ವೇಳೆ ಪಟ್ಟಿ ಅಂತಿಮಗೊಳ್ಳಲಿದೆ. ಹಾಲಿ ನಡೆಸಲುದ್ದೇಶಿಸಿದ್ದ ಸಮಾವೇಶಗಳನ್ನು ಬೃಹತ್ ಸಮಾವೇಶಗಳನ್ನಾಗಿ ಪರಿವರ್ತಿಸಲಿದ್ದು, ಪಾದಯಾತ್ರೆ ಉದ್ದಕ್ಕೂ ಬಿಜೆಪಿ ಅಲೆ ಎಬ್ಬಿಸುವ ಸಂಕಲ್ಪ ತೊಟ್ಟಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಅ.11ರಿಂದ 13ರವರೆಗೆ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿಯಲ್ಲಿ ಸಂಘಟನಾ ಪ್ರವಾಸ ನಡೆಸಿ ಅ.16ರಂದು ಎಸ್ಸಿ ಮೋರ್ಚಾ ರ್ಯಾಲಿ ನಡೆಯಲಿದೆ. ಅ.19ರಿಂದ 23ರವರೆಗೆ ಬೀದರ್, ಯಾದಗಿರಿ, ಕಲಬುರಗಿಯಲ್ಲಿ ಪ್ರವಾಸ ನಡೆಸಿ, 30ರಂದು ಒಬಿಸಿ ಮೋರ್ಚಾ ರ್ಯಾಲಿ, ನ.2ರಿಂದ 9ರವರೆಗೆ ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ ಬಳಿಕ ನ.13ರಂದು ಹುಬ್ಬಳ್ಳಿಯಲ್ಲಿ ಬೃಹತ್ ರೈತ ಮೋರ್ಚಾ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ.

ನ.15ರಿಂದ 23ರವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ದಾವಣಗೆಎ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಪ್ರವಾಸ ಮಾಡಿ ನ.27ರಂದು ಯುವ ಮೋರ್ಚಾ ರ್ಯಾಲಿ, ನ.29ರಿಂದ ಡಿ.7ರವರೆಗೆ ತುಮಕೂರು, ಕೋಲಾರ, ಬೆಂಗಳೂರು ನಗರದಲ್ಲಿ ಪ್ರವಾಸ ನಡೆಸಿ ಡಿ.11ರಂದು ಎಸ್ಟಿ ಮೋರ್ಚಾ ರ್ಯಾಲಿ, ಡಿ.11ರಿಂದ 25ರವರೆಗೆ ವಿಜಯಪುರ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮಹಿಳಾ ಮೋರ್ಚಾ ರ್ಯಾಲಿಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ಪ್ರತಿ ಸಮಾವೇಶದ ಮೂಲಕ ಒಂದೊಂದು ಘೋಷಣೆ:ರಾಜ್ಯದಲ್ಲಿ ಭಾರತ್ ಜೋಡೋ ಪಾದಯಾತ್ರೆಗೆ ಸಿಗುತ್ತಿರುವ ಜನಬೆಂಬಲಕ್ಕೆ ಪ್ರತಿಯಾಗಿ ರಾಜ್ಯಾದ್ಯಂತ ಕೇಸರಿ ಹವಾ ಎಬ್ಬಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ರಾಜ್ಯದ ಏಳು ಮಹಾನಗರಗಳಲ್ಲಿ ನಡೆಸಲುದ್ದೇಶಿಸಿರುವ ಸಮಾವೇಶಗಳನ್ನು ಬೃಹತ್ ಸಮಾವೇಶಗಳನ್ನಾಗಿ ಪರಿವರ್ತಿಸುತ್ತಿದ್ದು, 5 ಲಕ್ಷಕ್ಕೂ ಹೆಚ್ಚಿನ ಜನರನ್ನು ಸೇರಿಸಿ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎನ್ನುವ ಸಂದೇಶವನ್ನು ಸಾರಲು ನಿರ್ಧರಿಸಿದ್ದಾರೆ.ಪ್ರತಿ ಸಮಾವೇಶದ ಮೂಲಕವೂ ಒಂದೊಂದು ಘೋಷಣೆಗಳನ್ನು ಮಾಡಲು ನಿರ್ಧರಿಸಲಾಗಿದೆ.

ಕಲಬುರಗಿಯಲ್ಲಿ ಅಕ್ಟೋಬರ್ 30 ರಂದು ಒಬಿಸಿ ಮೋರ್ಚಾದಿಂದ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು, ಒಬಿಸಿ ಸಮುದಾಯಕ್ಕೆ ಸೇರಿದಂತೆ ಯಾವುದಾದರೂ ಯೋಜನೆ ಘೋಷಣೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.

ಆದರೆ ಯಾವ ಯೋಜನೆ ಎನ್ನುವುದನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದ್ದು, ಅದೇ ರೀತಿ ಬಳ್ಳಾರಿಯಲ್ಲಿ ಏಳನೇ ಸಮಾವೇಶ ನಡೆಯಲಿದ್ದು, ಎಸ್ಟಿ ಮೀಸಲಾತಿ ಕುರಿತು ಮಹತ್ವದ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ರೈತ ಮೋರ್ಚಾ, ಎಸ್ಸಿ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಯುವ ಮೋರ್ಚಾ, ಮಹಿಳಾ ಮೋರ್ಚಾ ಸಮಾವೇಶಗಳನ್ನು ನಡೆಸಿ ಆಯಾ ವರ್ಗಕ್ಕೆ ಸೇರಿದ ಯೋಜನೆಗಳ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಬಿಬಿಸಿ ಮೀಸಲಾತಿ, ಎಸ್ಸಿ ಮೀಸಲಾತಿ, ಎಸ್ಟಿ ಮೀಸಲಾತಿ ಕುರಿತು ಸಮಾವೇಶಗಳನ್ನು ಮಹತ್ವದ ಘೋಷಣೆಯಾಗುವ ಸಾಧ್ಯತೆ ಇದೆ. ಅದೇ ರೀತಿ ರೈತರಿಗೆ ಪೂರಕವಾಗಿ ನೀರಾವರಿ ಯೋಜನೆಗಳ ಘೋಷಣೆ, ಯುವ ಸಮೂಹಕ್ಕೆ ಸೇರಿದಂತೆ ಉದ್ಯೋಗದ ಘೋಷಣೆ, ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

104 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ:

ಇನ್ನು ಎರಡು ತಂಡಗಳು 104 ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಇಡೀ ಸರ್ಕಾರವೇ ಬಹುತೇಕ ಪ್ರವಾಸದಲ್ಲಿ ತೊಡಗಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಗಳು ಜನರ ಬಾಗಿಲಿಗೆ ತಲುಪುತ್ತಿರುವ ಮಾಹಿತಿಯನ್ನು ಪ್ರವಾಸದುದ್ದಕ್ಕೂ ಪ್ರಚಾರ ಮಾಡಲಾಗುತ್ತದೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಪರ ಅಲೆಯನ್ನು ಸೃಷ್ಟಿಸಲು ಚಿಂತನೆ ನಡೆಸಲಾಗಿದೆ.

ಈ ಮೊದಲು ಕೇವಲ ಸಮಾವೇಶಗಳಿಗೆ ಮಾತ್ರ ರಾಷ್ಟ್ರೀಯ ನಾಯಕರನ್ನು ಕರೆಸಲುದ್ದೇಶಿಸಿದ್ದ ಬಿಜೆಪಿ ಇದೀಗ ಕ್ಷೇತ್ರಗಳ ಪ್ರವಾಸದ ವೇಳೆಯಲ್ಲಿಯೂ ರಾಷ್ಟ್ರೀಯ ನಾಯಕರನ್ನು ಕರೆಸಿ ರಾಜ್ಯದಲ್ಲಿ ಕೇಸರಿ ಸಂಚಲನ ಸೃಷ್ಟಿಗೆ ಬಿಜೆಪಿ ತಂತ್ರ ರೂಪಿಸಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ 40 ಪರ್ಸೆಂಟ್ ವಿಷಯವೇ ಪ್ರಮುಖವಾಗಿ ಬಳಸಿಕೊಳ್ಳುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಭ್ರಷ್ಟಾಚಾರ, ಬಿಜೆಪಿ ಸಾಧನೆ ಪ್ರಸ್ತಾಪಿಸಿ ರಾಜ್ಯಾದ್ಯಂತ ಬಿಜೆಪಿ ಪರ ಚರ್ಚೆ ಹುಟ್ಟುಹಾಕುವ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಈ ಸಂಬಂಧ ಹಲವು ಸುತ್ತಿನ ಸಭೆಗಳನ್ನು ಬಿಜೆಪಿ ನಾಯಕರು ನಡೆಸಿದ್ದು, ದಸರಾ ಹಬ್ಬ ಮುಗಿಯುತ್ತಿದ್ದಂತೆ ಪ್ರಚಾರದ ಅಖಾಡಕ್ಕೆ ಬಿಜೆಪಿ ನಾಯಕರು ದುಮುಖಲಿದ್ದಾರೆ ಎನ್ನಲಾಗಿದೆ.

Articles You Might Like

Share This Article