ಬೆಂಗಳೂರು,ನ.2- ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಿ ಪ್ರಯಾಣಿಕರಿಗೆ ಸುಗಮ ಸಂಚಾರ ಒದಗಿಸಲು ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆ ವಿರುದ್ಧ ಪ್ರತಿಪಕ್ಷ ಬಿಜೆಪಿ ಮುಖಂಡರು ಇಲ್ಲಿನ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಸಹಿ ಅಭಿಯಾನ ಮತ್ತು ಮೌನ ಪ್ರತಿಭಟನೆ ನಡೆಸಿದರು.
ಬೆಂಗಳೂರು ರಕ್ಷಿಸಿ- ಸುರಂಗ ರಸ್ತೆ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ ರಾಮಮೂರ್ತಿ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮುಖಂಡರು ಭಾಗವಹಿಸಿದ್ದರು.
ಲಾಲ್‌ಬಾಗ್‌ನಲ್ಲಿ ಟನಲ್ ಯೋಜನೆ ಅನುಷ್ಠಾನ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಆಗಲಿದೆ, ಬೆಂಗಳೂರು ಇಷ್ಟು ಸುರಕ್ಷಿತವಾಗಿರಲು ಲಾಲ್‌ಬಾಗ್ ಬಂಡೆ ಎಷ್ಟು ಪ್ರಾಮುಖ್ಯತೆ ವಹಿಸಿದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ಉದ್ದೇಶಿತ ಯೋಜನೆಗೆ ಸಂಬಂಧಿಸಿದಂತೆ, ಲಾಲ್‌ಬಾಗ್‌ನಲ್ಲಿ ಬೆಳಗ್ಗೆ ವಾಯುವಿಹಾರ ನಡೆಸುತ್ತಿದ್ದ ಸಾರ್ವಜನಿಕರ ಜೊತೆಗೆ ಸಂವಾದ ನಡೆಸಿದರು. ಈ ಯೋಜನೆಯಿಂದ ಸಂಭವನೀಯ ಪರಿಸರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಯೋಜನೆ ನಗರಕ್ಕೆ ದುರಂತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ 6 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು.
ಟನಲ್ ರೋಡ್ ಮಾರ್ಗದ ಕುರಿತು ಲಾಲ್‌ಬಾಗ್ ಜಂಟಿ ನಿರ್ದೇಶಕ ಜಗದೀಶ್ ಅವರು ವಿವರಿಸಿದಾಗ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್, ಯಾವುದೇ ಯೋಜನೆ ಮಾಡಿದರೂ ಅನುಮತಿ ಪಡೆದುಕೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದರು.
ಈ ಯೋಜನೆಗೆ ನಾವು ಇನ್ನು ಅನುಮತಿಯನ್ನೇ ಕೊಟ್ಟಿಲ್ಲ ಎಂದು ಜಗದೀಶ್ ಹೇಳಿದಾಗ, ಆರು ಎಕರೆ ಬಳಸಿಕೊಂಡರೆ, ಇದು ಮಾರ್ಕೆಟ್ ಆಗುವುದಿಲ್ಲವೇ ಎಂದು ಅಶೋಕ್ ಮರುಪ್ರಶ್ನೆ ಮಾಡಿದರು.
ಮುಂದೆ ನಾವು ಇರುವುದಿಲ್ಲ ನೀವೂ ಇರುವುದಿಲ್ಲ. ಆದರೆ ನಾವು ಮಾಡುವ ಕೆಲಸ ಉಳಿಯಬೇಕು. ಯಾರೇ ಬಂದರೂ ಮೊದಲು ಭೇಟಿ ನೀಡುವುದೇ ಲಾಲ್‌ಬಾಗ್ ಮತ್ತು ವಿಧಾನಸೌಧಕ್ಕೆ. ನಾವು ಇಲ್ಲಿ ಪ್ರತಿಭಟನೆ ಮಾಡಲು ಬಂದಿಲ್ಲ. ನಿಮಗೆ ಏನೇ ಮಾಹಿತಿ ಬಂದರೂ ಅದನ್ನು ಸರ್ಕಾರಕ್ಕೆ ನೀಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡು ಭಾಗಿಯಾಗುತ್ತದೆ. ಈಗಾಗಲೇ ಟೆಂಡರ್ ಕೂಡ ಕರೆದಿದ್ದಾರೆ. ಇನ್ನೂ ಅನುಮತಿಯೇ ಸಿಕ್ಕಿಲ್ಲ ಎಂದು ಅಶೋಕ್ ಹೇಳಿದರು.
ಸಂಚಾರ ದಟ್ಟಣೆಯನ್ನು ಪರಿಹರಿಸಲು ಉದ್ದೇಶಿಸಿರುವ ಸುರಂಗ ರಸ್ತೆಯು ಯೋಜನೆಯ ಡಿಪಿಆರ್ ಪ್ರಕಾರ 22 ಹೆಚ್ಚುವರಿ ಚೆಕ್‌ಪಾಯಿಂಟ್‌ಗಳನ್ನು ಸೃಷ್ಟಿಸುತ್ತದೆ ಎಂದು ತೇಜಸ್ವಿ ಸೂರ್ಯ ಇತ್ತೀಚೆಗೆ ಹೇಳಿದ್ದರು.ಸುರಂಗಗಳು ಸಮಯವನ್ನು ಉಳಿಸಲು ಮತ್ತು ಪ್ರಯಾಣದ ದೂರವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಆದರೆ ಈ ಬೆಂಗಳೂರು ಸುರಂಗವು ವಾಸ್ತವವಾಗಿ ಪ್ರತಿ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್ 1 ಕಿ.ಮೀಗಿಂತ ಹೆಚ್ಚು ಉದ್ದವಿರುವುದರಿಂದ ಪ್ರಯಾಣದ ದೂರವನ್ನು 2 ಕಿ.ಮೀ ಹೆಚ್ಚಿಸುತ್ತದೆ ಎಂದು ಅವರು ದೂರಿದರು.
