ರಾಜ್ಯ ಪ್ರವಾಸಕ್ಕೆ ಬಿಜೆಪಿ ಸಿದ್ಧತೆ, ಪ್ರಚಾರದ ಅಖಾಡಕ್ಕೆ ಕೇಂದ್ರ ನಾಯಕರು

Social Share

ಬೆಂಗಳೂರು,ಆ.25- ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಎರಡು ತಂಡಗಳಲ್ಲಿ ರಾಜ್ಯ ಪ್ರವಾಸಕ್ಕೆ ಸನ್ನದ್ಧವಾಗಿದ್ದು, ಸೆಪ್ಟೆಂಬರ್ 8ರಂದು ಪ್ರವಾಸದ ಮಾರ್ಗ ಅಂತಿಮಗೊಳ್ಳಲಿದೆ. ಟಾರ್ಗೆಟ್ 150 ಗುರಿ ತಲುಪಲು ಪೂರಕವಾಗಿ ಸಂಘಟನಾತ್ಮಕವಾಗಿ ಪ್ರವಾಸ ಆರಂಭಿಸಲಿದ್ದು, ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾವುದೇ ತಂಡದ ನೇತೃತ್ವ ನೀಡಿಲ್ಲ. ಆದರೆ ಪ್ರವಾಸದಲ್ಲಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.

ಸೆಪ್ಟಂಬರ್ 11ರಂದು ರಾಜ್ಯ ಕಾರ್ಯಕಾರಿಣಿ ಸಭೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿ ಚುನಾವಣಾ ಸಿದ್ಧತೆ ಅಖಾಡಕ್ಕೆ ಧುಮುಕಲಿದೆ. ಮೊದಲ ಹಂತವಾಗಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯ ನಾಯಕರು 50 ಕ್ಷೇತ್ರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎರಡನೇ ತಂಡ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿವೆ.

ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡಾ ಸೆ.8 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದೇ ನಡ್ಡಾ ಜೊತೆ ಚರ್ಚಿಸಿ ಪ್ರವಾಸದ ರೋಡ್ ಮ್ಯಾಪ್‍ನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.

ಕಟೀಲ್ ಹಾಗೂ ಬೊಮ್ಮಾಯಿ ನೇತೃತ್ವದ ತಂಡಗಳು ಮಾತ್ರ ರಾಜ್ಯ ಪ್ರವಾಸ ಕೈಗೊಳ್ಳಬೇಕು ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಅದರಂತೆ ಎರಡು ತಂಡಗಳು ರಚನೆಯಾಗುತ್ತಿವೆ. ಬೊಮ್ಮಾಯಿ ತಂಡದಲ್ಲೇ ಯಡಿಯೂರಪ್ಪ ಕೂಡ ಇರಲಿದ್ದು, ಸಿಎಂ ಹಾಗೂ ಮಾಜಿ ಸಿಎಂ ಒಟ್ಟಾಗಿ ಒಂದೇ ತಂಡದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.

ಟಾರ್ಗೆಟ್ 150 ಗುರಿ ತಲುಪುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಬಿಜೆಪಿ ರಾಜ್ಯ ಪ್ರವಾಸಕ್ಕೆ ಅಣಿಯಾಗಿದ್ದು, ಜಾಣ್ಮೆಯಿಂದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಭದ್ರಕೋಟೆಯಾಗಿರುವ ಕ್ಷೇತ್ರಗಳನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅವುಗಳನ್ನೂ ಒಳಗೊಂಡಂತೆ ಪ್ರವಾಸಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

ಪಾಲಿಕೆ ಚುನಾವಣೆ ನಿಗದಿಯಾದರೆ ಮಾರ್ಗ ಬದಲು: ಯಾವ ಕ್ಷಣದಲ್ಲಿ ಬೇಕಾದರೂ ಬಿಬಿಎಂಪಿ ಚುನಾವಣೆ ಘೋಷಣೆಯಾಗಬಹುದು. ಒಂದು ವೇಳೆ ಚುನಾವಣೆ ಘೋಷಣೆಯಾದಲ್ಲಿ ಬಿಜೆಪಿ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಎರಡು ತಂಡಗಳು ಪ್ರವಾಸ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಲಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನೀತಿಸಂಹಿತೆ ಎದುರಾಗಲಿರುವ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯನ್ನು ಹೊರತುಪಡಿಸಿ ಪ್ರವಾಸ ನಡೆಸಲಿವೆ. ಹೆಚ್ಚುವರಿ ಕ್ಷೇತ್ರಗಳನ್ನು ಸೇರ್ಪಡೆ ಮಾಡಿಕೊಂಡು ಪ್ರವಾಸ ನಡೆಸಲಿವೆ ಎಂದು ತಿಳಿದುಬಂದಿದೆ.

ಚುನಾವಣಾ ಸಮೀಪದಲ್ಲಿ ಆಡಳಿತ ವಿರೋ ಅಲೆ ಎದ್ದು ಚುನಾವಣೆಯಲ್ಲಿ ನಕಾರಾತ್ಮಕ ಫಲಿತಾಂಶ ಬರುವ ಸಾಧ್ಯತೆ ಇದೆ. ಹಾಗಾಗಿ ಇತ್ತೀಚೆಗೆ ನಡೆದಿರುವ ಕೆಲ ಘಟನಾವಳಿಗಳಿಂದ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶವನ್ನು ತಣಿಸುವ ಕೆಲಸವನ್ನು ಈ ಪ್ರವಾಸದಲ್ಲಿ ಮಾಡಲಾಗುತ್ತದೆ.

ಒಟ್ಟಿನಲ್ಲಿ ಚುನಾವಣೆಗೆ 8 ತಿಂಗಳು ಬಾಕಿ ಇರುವಾಗಲೇ ರಾಜ್ಯ ಬಿಜೆಪಿ ಪಾಳಯ ಪ್ರಚಾರದ ಅಖಾಡಕ್ಕೆ ದುಮುಕುತ್ತಿದೆ. ಮೊದಲ ಹಂತದ ರಾಜ್ಯ ಪ್ರವಾಸ ಮುಗಿಯುತ್ತಿದ್ದಂತೆ ಎರಡನೇ ಹಂತದ ರಾಜ್ಯ ಪ್ರವಾಸಕ್ಕೆ ಮುಹೂರ್ತ ನಿಗದಿಪಡಿಸಲಿದ್ದು, ಆ ಪ್ರವಾಸಕ್ಕೆ ಕೇಂದ್ರದ ನಾಯಕರನ್ನೂ ಕರೆತರಲಿದ್ದಾರೆ ಎಂದು ತಿಳಿದುಬಂದಿದೆ.

Articles You Might Like

Share This Article