ವಿಧಾನಸಭೆ ಚುನಾವಣೆಗೆ ಬಿಜೆಪಿಯ ಪ್ರಮುಖ ಅಸ್ತ್ರವಾಗಲಿದೆ ಮೀಸಲಾತಿ ಹೆಚ್ಚಳ

Social Share

ಬೆಂಗಳೂರು,ಅ.15- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವುದೇ ಬಿಜೆಪಿಯ ಪ್ರಮುಖ ಅಸ್ತ್ರವಾಗಲಿದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ದಲಿತರು, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಜನತೆಯ ಮುಂದಿಟ್ಟು ಮತ ಸೆಳೆಯುವ ಲೆಕ್ಕಚಾರದಲ್ಲಿ ಕಮಲ ನಾಯಕರು ಇದ್ದಾರೆ. ಇದರ ಜತೆಗೆ ಹಿಂದುಳಿದವರು ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳನ್ನು ತನ್ನತ್ತ ಸೆಳೆಯಲು ಮುಂದಾಗಿದೆ.

ಇದರ ಮೊದಲ ಹಂತವಾಗಿ ಈಗಾಗಲೇ ದಲಿತರ ಮನೆಗಳಿಗೆ ಭೇಟಿ ನೀಡಿ ತಿಂಡಿ, ಭೋಜನ ಸ್ವೀಕರಿಸುವ ಮೂಲಕ ಆ ಸಮುದಾಯದ ಮತ ಬ್ಯಾಂಕ್‍ಗೆ ಕೈ ಹಾಕಿದೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇದೇ ರೀತಿ ದಲಿತರು, ಹಿಂದುಳಿದವರು ಸೇರಿದಂತೆ ಮತ್ತಿತರ ಮನೆಗಳಿಗೆ ಭೇಟಿ ಕೊಟ್ಟಿತ್ತು. ಕಾಂಗ್ರೆಸ್ ಈ ಬಗ್ಗೆ ಸಾಕಷ್ಟು ಟೀಕೆ ಮಾಡಿತ್ತು.

ಆದರೆ ಇದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಪರಿಣಾಮ ಮೀಸಲಾತಿ ಮತ್ತು ಹಿಂದುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗಿಂತಲೂ ಅಧಿಕ ಸ್ಥಾನ ಪಡೆಯುವಲ್ಲಿ ಬಿಜೆಪಿ ಹೂಡಿದ್ದ ರಣತಂತ್ರ ಫಲಕೊಟ್ಟಿತ್ತು. ಇದರ ಮುಂದುವರೆದ ಭಾಗವಾಗಿ ಬಳ್ಳಾರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ , ಸಚಿವ ಗೋವಿಂದ ಕಾರಜೋಳ ಮತ್ತಿತರರು ದಲಿತರ ಮನೆಗಳಿಗೆ ಭೇಟಿ ಕೊಟ್ಟು ಬೆಳಕಿನ ಉಪಹಾರ ಸೇವಿಸಿದ್ದರು.

ಕೇವಲ ದಲಿತರ ಮನೆಗೆ ಮಾತ್ರವಲ್ಲದೆ ಸ್ಥಳೀಯ ಮಠಮಂದಿರಗಳಿಗೂ ಭೇಟಿ ಕೊಟ್ಟು ಕಾಂಗ್ರೆಸ್‍ನ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಬಿಜೆಪಿ ರಣತಂತ್ರ ರೂಪಿಸಿದೆ. ಒಂದು ಕಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ ನಡೆಸುವ ಮೂಲಕ ಎಲ್ಲ ಸಮುದಾಯಗಳ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಇದರ ಸುಳಿವು ಅರಿತ ಬಿಜೆಪಿ, ಕಾಂಗ್ರೆಸ್ ಕಡೆ ಮತಗಳು ಚದುರಿ ಹೋಗದಂತೆ ಹಿಡಿದಿಟ್ಟುಕೊಳ್ಳಲು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.

ಬರುವ ದಿನಗಳಲ್ಲಿ ಇನ್ನಷ್ಟು ಕಡೆ ಈ ಸಮುದಾಯದ ಮತಗಳನ್ನು ಸೆಳೆಯಲು ಪ್ರಮುಖರು ಮನೆಗಳಿಗೆ ಭೇಟಿ ನೀಡುವುದು, ವಾಸ್ತವ್ಯ ಹೂಡುವುದು ಸೇರಿದಂತೆ ಆ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಾದರೆ ದಲಿತ ಸಮುದಾಯದ ಮತಗಳು ಅತ್ಯಗತ್ಯ ಎಂದು ಮನಗಂಡಿರುವ ಬಿಜೆಪಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗುವ ಲೆಕ್ಕಾಚಾರದಲ್ಲಿದೆ.

ಮುಂಬರುವ ದಿನಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ಬಿಜೆಪಿ ನಾಯಕರು ಕಡ್ಡಾಯವಾಗಿ ದಲಿತ ಕೇರಿಗಳಿಗೆ ತೆರಳುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ರೂಪಿಸುವತ್ತ ಮಗ್ನವಾಗಿದೆ.

2018ರಲ್ಲಿ ತುಮಕೂರಿನ ದಲಿತರ ನಿವಾಸಕ್ಕೆ ಯಡಿಯೂರಪ್ಪ ಭೇಟಿ ಕೊಟ್ಟಾಗ ಇಡ್ಲಿ, ವಡೆ ಸೇವಿಸಿದ್ದರು. ಇದು ಹೋಟೆಲ್‍ನಿಂದ ತಂದು ಸೇವಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೂ ಇದಾವುದಕ್ಕೂ ಜಗ್ಗದೆ ಬಿಜೆಪಿ ಆ ಸಮುದಾಯ ಮತಗಳನ್ನು ಸೆಳೆಯುವಲ್ಲಿ ಒಂದಿಷ್ಟು ಯಶಸ್ವಿ ಕಂಡಿತ್ತು.

ಇನ್ನು ಬರುವ ದಿನಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವ ವಿಷಯವನ್ನು ಹೆಚ್ಚು ಹೆಚ್ಚು ಪ್ರಸ್ತಾಪಿಸಲಿದೆ. ತಮ್ಮ ಸರ್ಕಾರ ದಲಿತರ ಪರವಾಗಿದೆ ಎಂಬುದನ್ನು ಬಿಂಬಿಸಬೇಕೆಂದು ವರಿಷ್ಠರು ಕೂಡ ಸೂಚನೆ ಕೊಟ್ಟಿದ್ದಾರೆ.

ಪ್ರತಿಪಕ್ಷಗಳು ಏನೇ ಆರೋಪ ಮಾಡಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ವಿರೋಧ ಪಕ್ಷಗಳು ಇರುವುದೇ ವಿರೋಧಿಸಲು. ಹಿಂದುಳಿದವರು, ದಲಿತರು, ಪರಿಶಿಷ್ಟ ವರ್ಗಗಳ ಸಮುದಾಯ ಬಿಜೆಪಿ ಪರವಾಗಿ ಇದೆ ಎಂಬುದಕ್ಕೆ 2018 ಮತ್ತು 2019 ಲೋಕಸಭೆ ಚುನಾವಣೆಯ ಫಲಿತಾಂಶವೇ ಸಾಕ್ಷಿ.

ಅದರಲ್ಲೂ ರಾಜ್ಯದ ಏಳು ಮೀಸಲು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ. ದಲಿತರ ಪರವಾಗಿದ್ದೇವೆ ಎಂದು ಹೇಳುತ್ತಿದ್ದ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದನ್ನು ಹೆಚ್ಚು ಪ್ರಸ್ತಾಪಿಬೇಕೆಂದು ಸೂಚಿಸಲಾಗಿದೆ.

ಅಧಿಕಾರದಲ್ಲಿದ್ದಾಗಲೂ ಕಾಂಗ್ರೆಸ್ ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ. ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ವರದಿ ಅನುಷ್ಠಾನ ಮಾಡಲಿಲ್ಲ. ನಮ್ಮ ಸರ್ಕಾರ ನ್ಯಾ.ಎಚ್‍ಎನ್ ನಾಗಮೋಹನ್ ದಾಸ್ ವರದಿಯನ್ನು ಅನುಷ್ಠಾನ ಮಾಡಲು ಮುಂದಾಗಿದೆ. ಇದನ್ನು ಆ ಸಮುದಾಯಗಳಿಗೆ ಮನವರಿಕೆ ಮಾಡುವಂತೆ ದೆಹಲಿ ನಾಯಕರು ಸೂಚಿಸಿದ್ದಾರೆ.

ಇದರ ಜೊತೆಗೆ ಬರುವ ದಿನಗಳಲ್ಲಿ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿರುವ ಮೇಲ್ವರ್ಗದ ಮಠಮಂದಿರಗಳು ಹಾಗೂ ಸಮುದಾಯದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮತ್ತೊಂದು ಕಾರ್ಯತಂತ್ರ ರೂಪಿಸಲಾಗಿದೆ.

Articles You Might Like

Share This Article