ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಭಾರೀ ರಣತಂತ್ರ

Social Share

ಬೆಂಗಳೂರು,ಜ.14- ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಕರ್ನಾಟಕದಲ್ಲಿ ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಈ ಬಾರಿ ಭಾರೀ ರಣತಂತ್ರವನ್ನೇ ರೂಪಿಸಲು ಮುಂದಾಗಿದೆ.

ಇದರ ಮೊದಲ ಹಂತವಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಘಟಾನುಘಟಿ ನಾಯಕರು ಚುನಾವಣೆಗೆ ಕಹಳೆ ಊದಿದ್ದಾರೆ.
ಇದೇ ತಿಂಗಳ 19ರಂದು ಪ್ರಧಾನಿ ನರೇಂದ್ರಮೋದಿ ಕಲಬುರಗಿಗೆ ಭೇಟಿ ಕೊಡುತ್ತಿದ್ದಾರೆ.

ಇದೇ ತಿಂಗಳ ಅಂತ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ನರೇಂದ್ರಮೋದಿ ಅವರ ವರ್ಚಸ್ಸನ್ನು ಸಾಧ್ಯವಾದಷ್ಟೂ ಲಾಭ ಮಾಡಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಕರ್ನಾಟಕದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರಕಾರ ಬೇಕೆಂದು ಮತದಾರರ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದೆ.

ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಪ್ರತಿಯೊಂದು ವಿಚಾರವೂ ಚುನಾವಣೆಗೆ ಥಳಕು ಹಾಕಿಕೊಂಡೇ ಇರುತ್ತದೆ. ಮುಂಬರುವ ರಾಜ್ಯ ಬಜೆಟ್ ಕೂಡ ಚುನಾವಣಾ ವಿಚಾರವೇ. ಏಕೆಂದರೆ ಯಾವುದೇ ಪಕ್ಷದ ಸರ್ಕಾರವಿರಲಿ ಚುನಾವಣೆಗೆ ಮುನ್ನ ಮಂಡಿಸುವ ಬಜೆಟ್ನಲ್ಲಿ ಭರವಸೆಗಳ ಪೂರವೇ ಇರುತ್ತದೆ.

ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನೇ ಬಜೆಟ್ನಲ್ಲಿ ಭಟ್ಟಿ ಇಳಿಸಿರುತ್ತಾರೆ. ಇದಕ್ಕೆ ಬಿಜೆಪಿ ಕೂಡ ಹೊರತಲ್ಲ. ಚುನಾವಣಾ ವರ್ಷವಾದ ಕಾರಣ ಈ ಬಾರಿ ಬೊಮ್ಮಾಯಿ ಮಂಡಿಸುವ ರಾಜ್ಯ ಬಜೆಟ್ನಲ್ಲಿ ಒಂದಷ್ಟು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಬಹುದು.

ತಾರಕಕ್ಕೇರಿದ ಪಂಚಮಸಾಲಿ ಮೀಸಲಾತಿ ಸಮರ

ಮುಂದಿನ ತಿಂಗಳು ಫೆಬ್ರವರಿ 17ಕ್ಕೆ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಈ ಬಜೆಟ್ನಲ್ಲಿ ಬೊಮ್ಮಾಯಿ ಸರ್ಕಾರ ಭರವಸೆಗಳ ಬುತ್ತಿಯನ್ನೇ ಬಿಚ್ಚಿಡಬಹುದು. ಈ ಹಿಂದೆ ಅಕಾರದಲ್ಲಿದ್ದ ಸರ್ಕಾರಗಳೂ ಇದನ್ನೇ ಮಾಡಿದ್ದವು.

ಸಿದ್ದರಾಮಯ್ಯ ಅವರಂತೂ ಭಾಗ್ಯ ರಾಮಯ್ಯ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಜನಪ್ರಿಯ ಘೋಷಣೆಗಳನ್ನು ಮಾಡಿದ್ದರು. ಈಗ ಬೊಮ್ಮಾಯಿ ತಮ್ಮ ಬಜೆಟ್ಲ್ಲಿ ಏನು ಮಾಡುತ್ತಾರೆ? ಎಂಬುದೇ ಸದ್ಯದ ಕುತೂಹಲವಾಗಿದೆ. ಮಾಹಿತಿ ಪ್ರಕಾರ ಸಂಕ್ರಾಂತಿ ಬಳಿಕ ಬೊಮ್ಮಾಯಿ ಅವರು ಬಜೆಟ್ ಸಿದ್ದತೆಯಲ್ಲಿ ತೊಡಗುತ್ತಾರಂತೆ. ಇದು ಬೊಮ್ಮಾಯಿ ಸರ್ಕಾರದ ಕೊನೆಯ ಹಾಗೂ ಪೂರ್ಣ ಪ್ರಮಾಣದ ಬಜೆಟ್.

ಹೀಗಾಗಿ ಈ ವರ್ಷ ಬಿಜೆಪಿ ಅಧಿಕಾರಉಳಿಸಿಕೊಂಡರೆ ತಮ್ಮ ಪಕ್ಷವು ಜನರಿಗೆ ಏನೆಲ್ಲಾ ಕೊಡುಗೆಗಳನ್ನು ನೀಡಲಿದೆ ಎಂಬುದರ ಚಿತ್ರಣವನ್ನು ಬಜೆಟ್ನಲ್ಲಿ ಕಟ್ಟಿಕೊಡುವುದಕ್ಕೆ ಸಿಎಂ ಸಿದ್ದತೆ ನಡೆಸುತ್ತಿದ್ದಾರೆ.

ಯಾವುದೇ ಆಡಳಿತಾರೂಢ ಪಕ್ಷಕ್ಕೆ ಚುನಾವಣೆ ಹೊತ್ತಲ್ಲಿ ಮೊದಲು ಎದುರಾಗುವ ಸವಾಲು ಎಂದರೆ ಅದು ಆಡಳಿತ ವಿರೋ ಅಲೆ. ಎಷ್ಟೋ ಶಾಸಕರು, ಸಚಿವರ ಕಾರ್ಯವೈಖರಿ ಜನರಿಗೆ ಇಷ್ಟ ಆಗಿಲ್ಲದೆ ಇರಬಹುದು. ಕೆಲವು ಸೋಮಾರಿ ಶಾಸಕರು ಕ್ಷೇತ್ರದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿರಬಹುದು.

ಇಂಥವರನ್ನು ಗುರುತಿಸಿ ಟಿಕೆಟ್ ಕೊಡದೇ ಇದ್ದರೆ, ಆಡಳಿತಾರೂಢ ಪಕ್ಷ ಗೆಲುವಿನ ಮೊದಲ ಮೆಟ್ಟಿಲು ಹತ್ತಿದಂತೆಯೇ. ಹೀಗಾಗಿ ಈ ಬಾರಿಯ ಚುನಾವಣೆಲ್ಲಿ ಬಿಜೆಪಿ ಇದೇ ತಂತ್ರ ಅನುಸರಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 42 ಶಾಸಕರಿಗೆ ಟಿಕೆಟ್ ಕೊಡಲೇ ಇಲ್ಲ.

ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕರನ್ನು ಹೈಕಮಾಂಡ್ ದೂರ ಇಟ್ಟಿತು. ಆ ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆಗಳನ್ನು ಮಾತ್ರ ಗುರುತಿಸಿ ಅವರಿಗೆ ಟಿಕೆಟ್ ಕೊಟ್ಟರು. ಇನ್ನು ಈ ಹಂತದಲ್ಲಿ ಕೆಲವು ಶಾಸಕರು ಬಂಡಾಯ ಎದ್ದರು. ಅವರ ವಿರುದ್ಧ ಹೈಕಮಾಂಡ್ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಂಡಿತು.

ಗುಜರಾತ್ನಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಪ್ರಮುಖ ಅಂಶ ಇದು. ಇದೇ ಯಶಸ್ವಿ ಸೂತ್ರ ಕರ್ನಾಟಕದಲ್ಲೂ ಜಾರಿಯಾಗುವ ಬೆಳವಣಿಗೆಗಳು ಕಂಡುಬರುತ್ತಿವೆ. ಗುಜರಾತ್ನಲ್ಲಿ ಚುನಾವಣೆಗೆ ಒಂದು ವರ್ಷ ಮೊದಲು ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಮಾಡಲಾಗಿತ್ತು. ಅವರು ಇಡೀ ಸಂಪುಟ ಬದಲಾಯಿಸಿದರು. ಸೋಮಾರಿ ಸಚಿವರನ್ನು ಹೊರಗೆ ಹಾಕಿದರು. ಬಿಜೆಪಿ ಗೆಲುವಿಗೆ ಇದೂ ಕೂಡ ಕಾರಣವಾಯಿತು.

ಆದರೆ ಇಲ್ಲಿ ಹಾಲಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ಮೊದಲು ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡಿ ಎಂದು ಬಿಜೆಪಿ ಚಾಟಿ ಬೀಸಿದೆ. ಹೀಗಾಗಿ ಗೆಲ್ಲುವ ಕುದುರೆಗೆ ಮಾತ್ರ ಹೈಕಮಾಂಡ್ ಮಣೆ ಹಾಕುತ್ತದೆ ಎಂಬುದು ಟಿಕೆಟ್ ಆಕಾಂಕ್ಷಿಗಳಿಗೂ ಚೆನ್ನಾಗಿ ಅರ್ಥವಾಗಿದೆ.

#BJPStrategy, #2023AssemblyElection,

Articles You Might Like

Share This Article