ರಾಜ್ಯದಲ್ಲಿ ಪಕ್ಷ ಬಲವರ್ದನೆ ಬಿಜೆಪಿ ತಂತ್ರಗಾರಿಕೆ

Social Share

ಬೆಂಗಳೂರು,ಆ.17- ಮುಂಬರುವ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹಿನ್ನಲೆಯಲ್ಲಿ ನಾಳೆ ಬಿಜೆಪಿ ಪದಾಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಜಿಲ್ಲಾಧ್ಯಕ್ಷರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಮತ್ತಿತರರು ಭಾಗಿಯಾಗಲಿದ್ದಾರೆ.

ಮುಂಬರುವ ಬಿಬಿಎಂಪಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಸೇರಿದಂತೆ 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಬಲಪಡಿಸುವ ಗುರಿಯೊಂದಿಗೆ ಕೆಲವು ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಅಧಿಕಾರ ಅವ ಈ ತಿಂಗಳ 20ಕ್ಕೆ ಕೊನೆಗೊಳ್ಳಲಿದ್ದು, ತೆರವಾಗಲಿರುವ ಈ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುವ ಬಗ್ಗೆಯೂ ಚರ್ಚೆ ನಡೆಯುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಕರ್ನಾಟಕದತ್ತ ವಿಶೇಷ ಗಮನಹರಿಸಿರುವ ಬಿಜೆಪಿ ಈ ಬಾರಿಯ 50 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ರಣತಂತ್ರ ರೂಪಿಸಿದೆ. ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿದ್ದು, ಹಳೇ ಮೈಸೂರು ಕರ್ನಾಟಕದ ಕನಿಷ್ಟ 50 ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸಬೇಕೆಂದು ಬಿಜೆಪಿ ವರಿಷ್ಠರು ಗುರಿ ನೀಡಿದ್ದಾರೆ.

ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ , ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿ ಈ ಕ್ಷೇತ್ರಗಳಲ್ಲಿ ಕನಿಷ್ಟ 50ರ ಗುರಿಯನ್ನು ತಲುಪಲೇಬೇಕೆಂದು ಕಾರ್ಯತಂತ್ರ ಹೆಣೆಯಲಾಗಿದೆ.

ಹಳೆಮೈಸೂರು ಕರ್ನಾಟಕ ಗೆದ್ದರೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಬೇರೊಂದು ಪಕ್ಷದ ಜೊತೆ ಮೈತ್ರಿ ಇಲ್ಲವೇ ಆಪರೇಷನ್ ಕಮಲ, ಪಕ್ಷೇತರ ಶಾಸಕರಿಗೆ ದುಂಬಾಲು ಬೀಳುವುದು ಅನಿವಾರ್ಯವಾಗುತ್ತದೆ.

ಇದನ್ನು ತಪ್ಪಿಸಬೇಕಾದರೆ ಹಳೆ ಮೈಸೂರು ಭಾಗದಲ್ಲಿ ಬರುವ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಪದಾಧಿಕಾರಿಗಳಿಗೆ ಟಾಸ್ಕ್ ನೀಡಲಾಗುತ್ತದೆ. ಕಳೆದ ಬಾರಿ ನಡೆದ ಪ್ರಮುಖರ ಸಭೆಯಲ್ಲಿ ಈಗಾಗಲೇ ಗೆದ್ದಿರುವ ಸಚಿವರು ಮತ್ತು ಶಾಸಕರು ತಮ್ಮ ಅಕ್ಕಪಕ್ಕದ ಕ್ಷೇತ್ರಗಳಿಗೂ ಗಮನಹರಿಸಬೇಕು. ಅಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಬೇಕೆಂದು ಸೂಚನೆ ನೀಡಲಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ನಾಳೆ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಂದರ್ಭದಲ್ಲಿ ಹೊಸ ಅಧ್ಯಕ್ಷರ ನೇಮಕಾತಿ ಬಗ್ಗೆಯೂ ಅಭಿಪ್ರಾಯವನ್ನು ಸಂಗ್ರಹಿಸಿ ವರಿಷ್ಠರಿಗೆ ತಲುಪಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 20ರ ನಂತರ ಹಾಲಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಬೇರೊಬ್ಬರು ನೇಮಕವಾಗಬಹುದು.
ಸಂಜೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಆಗಮಿಸಲಿದ್ದು, ನಾಳೆ ಇಡೀ ದಿನ ಪದಾಕಾರಿಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Articles You Might Like

Share This Article