ಹಿಂದುಳಿದ ಜಾತಿಗಳಿಗೆ ಬಿಜೆಪಿ ಗಾಳ

Social Share

ಬೆಂಗಳೂರು,ಡಿ.11- ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಪುನಃ ಗೆದ್ದು ಅಧಿಕಾರ ಹಿಡಿಯಬೇಕೆಂದು ಪಣ ತೊಟ್ಟಿರುವ ಬಿಜೆಪಿ ಸಣ್ಣ ಸಣ್ಣ ಸಮುದಾಯಗಳ ಓಲೈಸಿ ಕಾಂಗ್ರೆಸ್‍ನ ಅಸ್ತ್ರಕ್ಕೆ ಪ್ರತ್ಯಾಸ್ತ್ರ ರೂಪಿಸಲು ಮುಂದಾಗಿದೆ.

ಕೇವಲ ಪ್ರಧಾನಿ ನರೇಂದ್ರಮೋದಿ ನಾಮಬಲದ ಮೇಲೆ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತಿರುವ ಬಿಜೆಪಿ, ಕೆಳಸ್ತರದ ಸಮುದಾಯಗಳಿಗೆ ಸಂವಿಧಾನಬದ್ದ ಸ್ಥಾನಮಾನ, ನಿಗಮಮಂಡಳಿಗೆ ನೇಮಕಾತಿ ಸೇರಿದಂತೆ ಪ್ರತಿಯೊಂದು ಸಮುದಾಯಗಳನ್ನು ಸೆಳೆಯಲು ರಣತಂತ್ರ ಹೆಣೆದಿದೆ.

ಕಾಂಗ್ರೆಸ್ ಪಾರಂಪರಗತವಾಗಿ ನಂಬಿಕೊಂಡಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು ಸೇರಿದಂತೆ ಇದರಲ್ಲೇ ಅತಿ ಹಿಂದುಳಿದ ಸಣ್ಣ ಸಣ್ಣ ಅಂದರೆ ಉಪ್ಪಾರ, ಕುಂಬಾರರು, ಮರಾಠಿಗರು, ಕ್ಷತ್ರೀಯರು, ಬಿಲ್ಲವರು ಸೇರಿದಂತೆ ಮತ್ತಿತರ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡಲು ತೀರ್ಮಾನಿಸಿದೆ.

ಕಾಂಗ್ರೆಸ್‍ಗೆ ಕಂಟಕವಾದ AAP ಮತ್ತು AIMIM

ಮಾಜಿ ಸಿಎಂ ಸಿದ್ದರಾಮಯ್ಯನವರ ನಾಯಕತ್ವದ ಕಾರಣಕ್ಕೆ ಕಾಂಗ್ರೆಸ್‍ಗೆ ಬೆನ್ನೆಲುಬಾಗಿ ನಿಂತಿರುವ ಕುರುಬ ಸಮುದಾಯದಿಂದ ಶೇ.25ರಿಂದ 30ರಷ್ಟು ಮತಗಳನ್ನು ಸೆಳೆಯುವ ಉದ್ದೇಶದಿಂದ ಬೆಳಗಾವಿ ಅಧಿವೇಶನದ ವೇಳೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಪಂಚಮಸಾಲಿ ಸಮುದಾಯದ ಮೀಸಲಾತಿಯನ್ನು ಮರೆಮಾಚಲು ರಾಯಣ್ಣ ಮೂರ್ತಿ ಪಕ್ಕದಲ್ಲೇ ವೀರರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಚಾಲನೆ ದೊರಕಲಿದೆ.

ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಕಾಗಿನೆಲೆ ಸ್ವಾಮೀಜಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ.

ಕುಂಬಾರರು, ಉಪ್ಪಾರರು, ಮೊಗವೀರರು, ಕ್ಷತ್ರೀಯರು, ಬಿಲ್ಲವ, ಈಡಿಗ ಸೇರಿದಂತೆ ಮತ್ತಿತರ ಸಣ್ಣ ಸಣ್ಣ ಸಮುದಾಯಗಳಿಗೆ ನಿಗಮಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.

ಚಾಮರಾಜನಗರ, ಮೈಸೂರು ಮತ್ತಿತರ ಕಡೆ ವಾಸವಾಗಿರುವ ಆದಿವಾಸಿಗಳ ಹಾಡಿಗೆ ಮೂಲಭೂತ ಸೌಕರ್ಯ ಸೇರಿದಂತೆ ಅನುದಾನವನ್ನು ಸಹ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸಕ್ಕೆ ಬ್ರೇಕ್ : ಆಸ್ಪತ್ರೆಗೆ ಸ್ಥಳಾಂತರಿಸಿದ ಪೊಲೀಸರು

ಸದಾಶಿವ ಆಯೋಗ ವರದಿ ಅನುಷ್ಠಾನ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಮುನ್ನಲೆಗೆ ಬಂದಿದ್ದ ದಲಿತ ಸಮುದಾಯಕ್ಕೆ ಒಳಮೀಸಲಾತಿ ನೀಡುವ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಮಾಡುವ ಬಗ್ಗೆ ಆರ್‍ಎಸ್‍ಎಸ್‍ನ ಥಿಂಕ್ ಟ್ಯಾಂಕ್ ಚಿಂತನೆ ನಡೆಸಿದೆ.

ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಮಾಡಿದರೆ ಪರಿಶಿಷ್ಟ ಜಾತಿಯ ಶೇ.50ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಬಹುದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲೇ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ದಲಿತ ಸಮುದಾಯಗಳಲ್ಲಿ ಇದು ಪರ-ವಿರೋಧ ವ್ಯಕ್ತವಾಗಿದ್ದರಿಂದ ವರದಿ ಜಾರಿಗೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಬೊಮ್ಮಾಯಿ ಅವರು ಕಾನೂನು ತಜ್ಞರ ಜೊತೆ ಚರ್ಚಿಸಿ ಅನುಷ್ಠಾನ ಮಾಡುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಕಳೆದ ಹಲವು ದಿನಗಳಿಂದ ದಲಿತ ಸಮುದಾಯವು ಒಂದಾಗಿದ್ದು, ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಬೇಕೆಂದು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಲೇ ಇದೆ.

ಈಗಾಗಲೇ ಪರಿಶಿಷ್ಟ ಜಾತಿ/ಪಂಗಡಕ್ಕೆ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರ ಈಗ ಒಳಮೀಸಲಾತಿ ನೀಡುವ ವರದಿಯನ್ನು ಅನುಷ್ಠಾನ ಮಾಡಲು ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಂಚಮಸಾಲಿ ಸಮುದಾಯಕ್ಕೂ ಮೀಸಲಾತಿ:
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಗಂಭೀರವಾಗಿ ಚಿಂತಿಸಿದೆ. ಪ್ರಸ್ತುತ ಪ್ರವರ್ಗ 3ಬಿ ನಲ್ಲಿರುವ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಬೇಕೆಂಬುದು ಸಮುದಾಯದ ಒತ್ತಾಯವಾಗಿದೆ.

ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಗೆ ತಳಿಸಿ ತಲೆಬೋಳಿಸಿದ ಸೈಕೋ ಪತಿ

ಈಗಾಗಲೇ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ನೀಡಬೇಕೆಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಆಯೋಗವು ವರದಿ ನೀಡಲಿದ್ದು, ನಂತರ ಸರ್ಕಾರ ಸೂಕ್ತವಾದ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

ಹೀಗೆ ಪ್ರತಿಯೊಂದು ಸಮುದಾಯವನ್ನು ಓಲೈಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಸಾಂಪ್ರದಾಯಿಕ ಎಸ್ಸಿ-ಎಸ್ಟಿ, ಹಿಂದುಳಿದವರು, ಅತಿ ಹಿಂದುಳಿದ ಸಮುದಾಯದ ಮತಗಳನ್ನು ತನ್ನತ್ತ ಸೆಳೆದು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ನೀಲನಕ್ಷೆಯನ್ನು ಬಿಜೆಪಿ ಸಿದ್ದಪಡಿಸಿದೆ.

BJP, targets, backward, castes,

Articles You Might Like

Share This Article