ಆರ್.ಆರ್.ನಗರ ಉಪಚುನಾವಣೆ : ಮುನಿರತ್ನಗೆ ಬಿಜೆಪಿ ‘ಟಿಕೆಟ್’ ಫಿಕ್ಸ್..!?

ಬೆಂಗಳೂರು,ಅ.3-ಹಲವರ ವಿರೋಧದ ನಡುವೆಯೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಇದೇ ವೇಳೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ಡಾ.ರಾಜೇಶ್‍ಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ.

ಇಂದು ಸಂಜೆ ಅಥವಾ ನಾಳೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಎರಡು ವಿಧಾನಸಭಾ ಕ್ಷೇತ್ರ ಹಾಗೂ ನಾಲ್ಕು ವಿಧಾನಪರಿಷತ್ ಸ್ಥಾನಗಳಿಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸ್ಸು ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಿದೆ.

ಪ್ರತಿಷ್ಠಿತ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ, ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಮುನಿರತ್ನ ಅವರಿಗೆ ಟಿಕೆಟ್ ನೀಡಲು ಸಮ್ಮತಿಸಿದೆ.

ಇದೇ ಕ್ಷೇತ್ರದಿಂದ ಬಿಜೆಪಿ ಮುಖಂಡ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಸಿದ್ದ ತುಳಸಿ ಮುನಿರಾಜುಗೌಡ ವಿರೋಧದ ನಡುವೆಯೂ ಬಿಜೆಪಿ ಮುನಿರತ್ನಗೆ ಮಣೆ ಹಾಕಿದೆ.

ಆರ್‍ಆರ್‍ನಗರದಿಂದ ಮುನಿರತ್ನ ಅವರಿಗೆ ಟಿಕೆಟ್ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ತುಳಸಿ ಮುನಿರಾಜು ಗೌಡ ಪರ ನಿಂತಿದ್ದರು.

ಇದರ ಜೊತೆಗೆ ಕಾಂಗ್ರೆಸ್-ಜೆಡಿಎಸ್‍ನಿಂದ ಹೊರಬಂದು ಮಂತ್ರಿಯಾಗಿರುವ ಬಹುತೇಕರು ಮುನಿರತ್ನರಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಅವರೊಬ್ಬರಿಗೆ ಟಿಕೆಟ್ ನಿರಾಕರಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ.

ಎಲ್ಲರಿಗೂ ಟಿಕೆಟ್ ಕೊಟ್ಟಿರುವಾಗ ಮುನಿರತ್ನ ಅವರಿಗೆ ಟಿಕೆಟ್ ತಪ್ಪಿಸಿದರೆ ವಚನಭ್ರಷ್ಟ ಆರೋಪಕ್ಕೆ ಸಿಲುಕುತ್ತೇವೆ. ಹೀಗಾಗಿ ಟಿಕೆಟ್ ಕೊಡಲೇಬೇಕೆಂದು ಸಚಿವರಾದ ಸುಧಾಕರ್,ಎಸ್.ಟಿ.ಸೋಮಶೇಖರ್,ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ ಸೇರಿದಂತೆ ಬಹುತೇಕರು ಬಿಜೆಪಿ ಮುಖಂಡರ ಮೇಲೆ ಒತ್ತಡ ಹಾಕಿದ್ದರು.

ಶಿರಾದಲ್ಲಿ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ಡಾ.ರಾಜೇಶ್‍ಗೌಡ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಸಮ್ಮತಿಸಿದೆ. ಈ ಕ್ಷೇತ್ರದಿಂದ ಹಲವರು ಆಕಾಂಕ್ಷಿಗಳಾಗಿದ್ದರೂ ಕ್ಷೇತ್ರದಲ್ಲಿ ಕುಂಚಟಿಗ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ರಾಜೇಶ್ ಗೌಡ ಅವರನ್ನೇ ಅಭ್ಯರ್ಥಿಯನ್ನಾಗಿಸಲು ಪಕ್ಷ ತೀರ್ಮಾನಿಸಿದೆ.

ಈ ಕ್ಷೇತ್ರದಿಂದ ಮುಖಂಡರಾದ ಎಸ್.ಆರ್.ಗೌಡ, ಡಿ.ಕೆ.ಮಂಜುನಾಥ್, ಶಾಸಕಿ ಪೂರ್ಣಿಮಾ ಅವರ ಪತಿ ಸೇರಿದಂತೆ ಮತ್ತಿತರರು ಆಕಾಂಕ್ಷಿಗಳಾಗಿದ್ದರು. ಇದಾವುದನ್ನೂ ಪರಿಗಣಿಸದೆ ಬಿಜೆಪಿ ರಾಜೇಶ್‍ಗೌಡರಿಗೆ ಮಣೆ ಹಾಕಿದೆ.

ಇನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮಾಜಿ ಸದಸ್ಯ ಪುಟ್ಟಣ್ಣ, ಆಗ್ನೇಯ ಪದವೀಧರ ಕ್ಷೇತ್ರದಿಂದ ಚಿದಾನಂದಗೌಡ, ನೈರುತ್ಯ ಪದವೀಧರ ಕ್ಷೇತ್ರದಿಂದ ಶಶಿಲ್ ನಮೋಶಿ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿ.ಎಸ್.ಸಂಕನೂರ ಅವರುಗಳಿಗೂ ಟಿಕೆಟ್ ಖಾತ್ರಿಯಾಗಿದೆ.

ಬಂಡಾಯ, ಭಿನ್ನಮತ ಏನೇಬಂದರೂ ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲೇಬೇಕೆಂದು ಹೈಕಮಾಂಡ್ ಹುಕುಂ ಹೊರಡಿಸಿದೆ.

Sri Raghav

Admin