ಬೆಂಗಳೂರು, ಫೆ. 16-ಪದೇ ಪದೇ ಮಾಡಿದ ಮನವಿಗೆ ಸ್ಪಂದಿಸದ ಕಾರಣ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಅವರನ್ನು ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಚ್ಚರಿಕೆ ನೀಡಿದ ವಿಚಾರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತು.
ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಅವರು, ರಾಜ್ಯದಲ್ಲಿ ಇತ್ತೀಚಿನ ದ್ವೇಷಭಾಷಣ ಕುರಿತಂತೆ ಸಚಿವರು ಹಾಗೂ ಜನಪ್ರತಿನಿಗಳು ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡಿದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡು ನಾನು ಯಾರನ್ನು ವೈಯಕ್ತಿಕವಾಗಿ ಯಾರನ್ನು ಅಗೌರವಿಸುವ ಹಾಗೂ ಟೀಕೆ ಮಾಡುವ ಉದ್ದೇಶವಿಲ್ಲ. ಕೇವಲ ರಾಜಕೀಯ ಭಾಷಣ ಮಾಡಿದ್ದೇನೆಂದು ಸ್ಪಷ್ಟಪಡಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಯು.ಟಿ.ಖಾದರ್, ಕಾಂಗ್ರೆಸ್ನ ಕೃಷ್ಣಬೈರೇಗೌಡ, ತನ್ವೀರ್ಸೇಠ್, ಪ್ರಿಯಾಂಕ ಖರ್ಗೆ, ಈಶ್ವರಖಂಡ್ರೆ ಮತ್ತಿತರರು, ಸಚಿವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅವರ ಉತ್ತರ ಹಾರಿಕೆಯಾಗಿದೆ. ಆರೋಪಿ ಸ್ಥಾನದಲ್ಲಿ ಇರುವವರಿಂದ ಇನ್ನೇನು ಉತ್ತರ ನಿರೀಕ್ಷಿಸಲು ಸಾಧ್ಯ ಎಂದು ಮುಗಿ ಬಿದ್ದರು.
ಆಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಗದ್ದಲದ ನಡುವೆಯೇ ಅಶ್ವತ್ಥನಾರಾಯಣ ಉತ್ತರಿಸುತ್ತಿದ್ದಾಗ ಈಶ್ವರ ಖಂಡ್ರೆ ಏರಿದ ದ್ವನಿಯಲ್ಲಿ ಮಾತಾಡಿದ್ದು, ಸಭಾಧ್ಯಕ್ಷರನ್ನು ಕೆರಳಿಸಿತು. ಪದೇ ಪದೇ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದ ಹೊರತಾಗಿಯೂ, ಖಂಡ್ರೆ ಮಾತನಾಡುವುದನ್ನು ನಿಲ್ಲಿಸಲಿಲ್ಲ.
ಇದರಿಂದ ಸಹನೆ ಕಳೆದುಕೊಂಡ ಕಾಗೇರಿ ಅವರು, ನೀವು ಹಿರಿಯರು, ಈ ರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ. ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಸಭಾಧ್ಯಕ್ಷರು ಹೇಳಿದ ಮೇಲೂ ನೀವು ಪೀಠಕ್ಕೆ ಗೌರವ ಕೊಡದೆ ಮಾತನಾಡುತ್ತಿದ್ದೀರಿ. ಇದೇನಾ ನೀವು ಸಭಾಧ್ಯಕ್ಷರಿಗೆ ಕೊಡುವ ಗೌರವ ಎಂದು ಪ್ರಶ್ನಿಸಿದರು.
ನಾನು ಇದುವರೆಗೆ ಸಹನೆ ಕಳೆದುಕೊಳ್ಳದೇ ಮಾತನಾಡಿದ್ದೇನೆ. ಪೂರ್ಣ ಅಧಿಕಾರ ಚಲಾಯಿಸುವ ಅವಕಾಶ ಮಾಡಿಕೊಡಬೇಡಿ. ನನ್ನನ್ನು ಅನಗತ್ಯವಾಗಿ ಎಳೆದು ಮಾತನಾಡಿಸುತ್ತೀರಿ. ಕೇಳುವ ಸೌಜನ್ಯವಿಲ್ಲವೆ? ಪದೇ ಪದೇ ಇದೇ ರೀತಿ ಮುಂದುವರೆದರೆ, ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಸಭಾಧ್ಯಕ್ಷರು ಎಚ್ಚರಿಕೆ ನೀಡಿದರು.
ಸಭಾಧ್ಯಕ್ಷರ ಈ ಹೇಳಿಕೆಗೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಪ್ರಿಯಾಂಕ ಖರ್ಗೆ ಅವರು, ಇದೇನು ಸರ್ವಾಕಾರವೇ? ನಾವು ಈ ಸದನದ ಸದಸ್ಯರು. ಮಾತನಾಡುವ ಹಕ್ಕು ನಮಗೂ ಇದೆ. ಈ ರೀತಿ ಸೂಚಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಆಗ ಸಭಾಧ್ಯಕ್ಷರು, ನಿಮಗೆ ಮಾತ್ರ ಬಿಪಿ ಬರುವುದಿಲ್ಲ. ನನಗೂ ಕೂಡ ಬಿಪಿ ಬರುತ್ತದೆ. ನಿಮಗೆ ಕೊನೆ ಬಾರಿ ಎಚ್ಚರಿಕೆ ಕೊಡುತ್ತಿದ್ದೇನೆ. ಹೊರಗೆ ಹಾಕಬೇಕೇ ಎಂದು ಪ್ರಶ್ನಿಸಿ, ನಿಮ್ಮಂಥವರು ಆಯ್ಕೆಯಾಗಿ ಬರುವುದು ಈ ಸದನಕ್ಕೆ ಅವಮಾನ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಕೋಲಾಹಲ ಉಂಟಾಯಿತು.
ಸಭಾಧ್ಯಕ್ಷರ ಮಾತಿಗೆ ತೀವ್ರ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು, ಬಾಲ್ಕಿ ಜನರಿಗೆ ಮಾಡಿದ ಅವಮಾನವಿದು ಎಂದು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಸದನ ಸಹಜ ಸ್ಥಿತಿಗೆ ಬಾರದ ಕಾರಣ ಸಭಾಧ್ಯಕ್ಷರು ಸದನದ ಕಾರ್ಯಕಲಾಪವನ್ನು 15 ನಿಮಿಷ ಕಾಲ ಮುಂದೂಡಿದರು.
#BJPvsCongress, #Assembly, #Siddaramaiah,