ಪಾಟ್ನಾ,ಸೆ.4-ಪ್ರತಿಪಕ್ಷಗಳ ಒಗ್ಗಟ್ಟಿನಿಂದಾಗಿ ಬಿಜೆಪಿಯನ್ನು ಅಧಿಕಾರದಿಂದ ಹೊರದಬ್ಬುವ ಅಭಿಯಾನ ಯಶಸ್ವಿಯಾಗಲಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ 50 ಸ್ಥಾನಗಳಿಗೆ ಕುಸಿಯಲಿದೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹೇಳಿದ್ದಾರೆ.
ಪಾಟ್ನಾದಲ್ಲಿ ನಡೆಯುತ್ತಿರುವ ಜೆಡಿಯುನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಲ್ಲಿನ ಒಗ್ಗಟ್ಟಿನ ಹೋರಾಟದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಈ ಅಭಿಯಾನವನ್ನು ಮುನ್ನಡೆಸಲು ನಾನು ಸ್ವಯಂ ಸಿದ್ದನಿದ್ದೇನೆ. ಒಂದು ವೇಳೆ ನಾವು ನಿರೀಕ್ಷೆಯಂತೆ ಕೆಲಸ ಮಾಡಿದರೆ ಬಿಜೆಪಿ 50ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲಲಾರದು ಎಂದಿದ್ದಾರೆ.
ಎಲ್ಲಾ ರಾಷ್ಟ್ರೀಯ ಪಕ್ಷಗಳನ್ನು ಭೇಟಿ ಮಾಡಿ ಒಗ್ಗಟ್ಟು ಮೂಡಿಸುವ ಸಲುವಾಗಿ ನಿತೀಶ್‍ಕುಮಾರ್ ಸೆ.5ರಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಹೇಳಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕಾರ್ಯಕಾರಿಣಿ ಸಭೆಯಲ್ಲಿನ ಚರ್ಚೆಗಳು, ಘೋಷಣೆಗಳು, ಧೋರಣೆಗಳನ್ನು ನೋಡಿದರೆ 2024ರ ವೇಳೆಗೆ ನಿತೀಶ್‍ಕುಮಾರ್ ಪ್ರಧಾನಿ ಅಭ್ಯರ್ಥಿಯ ಗುಣಲಕ್ಷಣಗಳನ್ನು ಹೊರಹೊಮ್ಮಿಸಿದ್ದಾರೆ.
ಮಣಿಪುರದಲ್ಲಿ ಜೆಡಿಯುನ ಐವರು ಶಾಸಕರು ಬಿಜೆಪಿಗೆ ವಲಸೆ ಹೋದ ಬಳಿಕ ನಿತೀಶ್‍ಕುಮಾರ್ ಮತ್ತಷ್ಟು ರೊಚ್ಚಿಗೆದ್ದಂತೆ ಕಾಣುತ್ತಿದೆ. ಕಳೆದ ತಿಂಗಳವರೆಗೂ ಬಿಜೆಪಿ ಜೊತೆಯಲ್ಲೇ ಮೈತ್ರಿ ಸರ್ಕಾರ ರಚಿಸಿದ್ದ ನಿತೀಶ್‍ಕುಮಾರ್ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶದ ಬಳಿಕ ಬಿಜೆಪಿ ಬಿಹಾರದಲ್ಲಿ ಜೆಡಿಯುವನ್ನು ವಿಭಜಿಸಿ ತಮ್ಮ ನೇತೃತ್ವ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ತಮ್ಮ ಪಕ್ಷವನ್ನು ಅವನತಿಗೊಳಿಸುವ ಯತ್ನ ನಡೆಸಿದೆ ಎಂದು ಆರೋಪಿಸಿದ್ದರು .
ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ಆರ್‍ಜೆಡಿ ಜೊತೆ ಸೇರಿ ಮಹಾಘಟ್ಬಂಧನ್ ಸರ್ಕಾರ ರಚಿಸಿದ್ದಾರೆ.