ಜನರ ಒಲವು ಬಿಜೆಪಿ ಕಡೆಗಿದೆ, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ : ಬಿಎಸ್ವೈ

Social Share

ಬೆಂಗಳೂರು, ಫೆ.15- ಜನರ ಒಲವು ಬಿಜೆಪಿ ಕಡೆಗಿದೆ. ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸದಿಂದ ನುಡಿದರು.

ನಗರದ ದಿ ಕ್ಯಾಪಿಟಲ್ ಹೊಟೇಲ್ನಲ್ಲಿಂದು ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನರೇಂದ್ರ ಮೋದೀಜಿ ಅವರ ಶ್ರೇಷ್ಠ ನಾಯಕತ್ವ ನಮ್ಮ ಜೊತೆಗಿದೆ. ಎಂಕ, ನಾಣಿ ನಾಯಕತ್ವವು ಜೊತೆಗಿರುವ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ತಿಳಿಸಿದರು.

ವಿಶ್ವಾಸಾರ್ಹ ಮತ್ತು ಕ್ರಿಯಾಶೀಲ ಕಾರ್ಯಕರ್ತರ ದೊಡ್ಡ ಪಡೆ ನಮ್ಮ ಪಕ್ಷದ ಜೊತೆ ಇದೆ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿಸಿದರು. ಮೋದಿಜಿ ಸರ್ಕಾರದ 8-9 ವರ್ಷಗಳ ಸಾಧನೆ, ಜನಪರ ಆಡಳಿತವನ್ನು ಜನರಿಗೆ ತಿಳಿಸಬೇಕು. ಮೋದಿಜಿ ನಮ್ಮ ಪಕ್ಷದ ಪ್ರಮುಖ ಆಸ್ತಿ ಎಂದು ವಿವರಿಸಿದರು.

ಜನ್ಧನ್, ಆಯುಷ್ಮಾನ್, ಶೌಚಾಲಯ ನಿರ್ಮಾಣ, ಮನೆಮನೆಗೆ ನಲ್ಲಿ ನೀರು ಸೇರಿ ಹಲವು ಯೋಜನೆ ಜಾರಿಯನ್ನು ಉಲ್ಲೇಖಿಸಿದರು. ಪ್ರತಿ ಮನೆಯಲ್ಲೂ ಒಂದಿಲ್ಲೊಂದು ಫಲಾನುಭವಿ ಇದ್ದಾರೆ. ಅಂಥ ಫಲಾನುಭವಿಗಳನ್ನು ಗುರುತಿಸಿ ತಲುಪುವ ಕಾರ್ಯ ನಮ್ಮಿಂದ ಆಗಬೇಕೆಂದು ಕಿವಿಮಾತು ಹೇಳಿದರು. ಪಕ್ಷದ ಬೆನ್ನೆಲುಬಿನಂತೆ ಕೆಲಸ ಮಾಡಬೇಕೆಂದು ವಿನಂತಿಸಿದರು. ಸೀಟ್ ಹಂಚಿಕೆ ಬಳಿಕ ಸಣ್ಣಪುಟ್ಟ ಅಸಮಾಧಾನ ಇದ್ದರೆ ಅದನ್ನು ಶಮನಗೊಳಿಸಬೇಕೆಂದು ತಿಳಿಸಿದರು.

ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ನವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು. ನಾಯಕತ್ವ ಇಲ್ಲದೆ ಪರದಾಡುವ ಕಾಂಗ್ರೆಸ್ಸಿಗೆ ಭವಿಷ್ಯ ಇಲ್ಲ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ಮೋದಿಜಿ ಮತ್ತು ಅವರ ಜನಪರ ಯೋಜನೆಗಳ ಕುರಿತು ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಪ್ರಮುಖರು ಭಾಗವಹಿಸಿದ್ದರು.

#BJP, #AssemblyElection2023, #Yediyurappa,

Articles You Might Like

Share This Article