ಬೆಂಗಳೂರು,ಜ.20- ಪಂಚಮಸಾಲಿ ಸಮುದಾಯದ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡು ಸರ್ಕಾರಕ್ಕೆ ಮುಜುಗರ ಸೃಷ್ಟಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ವರಿಷ್ಠರು ಮಧ್ಯಪ್ರವೇಶಿಸಲು ಮುಂದಾಗಿದ್ದಾರೆ.
ಅದರಲ್ಲೂ ಸರ್ಕಾರದ ವಿರುದ್ಧವೇ ಗುಟುರು ಹಾಕುತ್ತಾ ಪ್ರತಿಪಕ್ಷಗಳ ಕೈಗೆ ಅಸ್ತ್ರ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬೀಗ ಹಾಕಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಬಸವ ಕಲ್ಯಾಣದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿರುವುದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡು ಕೇಂದ್ರ ವರಿಷ್ಠರ ರಂಗ ಪ್ರವೇಶ ಮಾಡಲು ತೀರ್ಮಾನಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನಾಳೆ ವಿಜಯಪುರಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಯತ್ನಾಳ್ ಜೊತೆ ಮಾತನಾಡಿ ಮೀಸಲಾತಿ ಹೋರಾಟದಲ್ಲಿ ಪಕ್ಷಕ್ಕೆ ಮತ್ತು ಸರ್ಕಾರದ ಹಿತಕ್ಕೆ ಧಕ್ಕೆಯಾಗದಂತೆ ಹೆಜ್ಜೆಯಿಡುವ ಬಗ್ಗೆ ಕಿವಿಮಾತು ಹೇಳುವ ಸಾಧ್ಯತೆಗಳಿವೆ.
BIG NEWS : ಶೂಟಿಂಗ್ ವೇಳೆ ತಮಿಳು ನಟ ವಿಜಯ್ ಅಂತೋನಿಗೆ ತೀವ್ರ ಗಾಯ
ಪಂಚಮ ಸಾಲಿಗಳಿಗೆ ರಾಜ್ಯ ಸರ್ಕಾರವು ಮೀಸಲಾತಿ ಬಗ್ಗೆ ಅಂತಿಮ ನಿರ್ಧಾರ ತಗೆದುಕೊಳ್ಳುವ ತನಕ ಸಮಾಧಾನದಿಂದ ಇರುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಇದರ ಮೇಲೆಯೂ ಪಕ್ಷದ ಚೌಕಟ್ಟನ್ನು ಮೀರಿ ಹೋದರೆ ಶಿಸ್ತು ಕ್ರಮ ಜರುಗಿಸುವ ಕುರಿತು ಕಮಲ ಪಡೆ ಮುಂದಾಗಲಿದೆ ಎನ್ನಲಾಗುತ್ತಿದೆ.
ಪಂಚಮಸಾಲಿಗಳು ತಮಗೆ 2ಎ ಮೀಸಲಾತಿ ನೀಡಲೇಬೇಕೆಂದು ರಾಜ್ಯದಲ್ಲಿ ಹಲವಾರು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಮೀಸಲು ಹೋರಾಟದ ನಾಯಕತ್ವ ವಹಿಸಿಕೊಂಡು ಬೊಮ್ಮಾಯಿ ಸರ್ಕಾರಕ್ಕೆ ಮೇಲಿಂದ ಮೇಲೆ ಗಡುವು ನೀಡುತ್ತಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಹೊಸ ಪ್ರವರ್ಗ 2ಡಿ ನಲ್ಲಿ ಮೀಸಲಾತಿ ನೀಡುವ ಸಂಬಂಧ ಸಚಿವ ಸಂಪುಟ ಸಭೆ ತಗೆದುಕೊಂಡ ತೀರ್ಮಾನವನ್ನು ತಿರಸ್ಕರಿಸಿ ಮತ್ತೆ ಹೋರಾಟ ನಡೆಸುತ್ತಿರುವ ಬಗ್ಗೆ ಬಿಜೆಪಿ ಹೈಕಮಾಂಡ್ ಸಂಪೂರ್ಣ ವರದಿಯನ್ನು ಪಡೆದುಕೊಂಡಿದೆ.
ನಾಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ
ಮೀಸಲಾತಿಗಾಗಿ ಯತ್ನಾಳ್ ಸ್ವಪಕ್ಷದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಮತ್ತು ಸ್ವಾಮೀಜಿಗಳೊಡಗೂಡಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಮತ್ತು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಬಗ್ಗೆ ಅವಹೇಳನಕಾರಿ ಮಾತುಗಳಿಂದ ಟೀಕಿಸುತ್ತಿರುವ ಬಗ್ಗೆಯೂ ದೆಹಲಿ ವರಿಷ್ಠರಿಗೆ ದೂರುಗಳು ತಲುಪಿದ್ದು, ಇದನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.
ಬಹಿರಂಗವಾಗಿ ಯತ್ನಾಳ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಏಟಿಗೆ ಪ್ರತಿ ಏಟು ನೀಡತೊಡಗಿದ್ದಾರೆ. ಮೀಸಲಾತಿ ವಿವಾದದ ವಿಷಯದಲ್ಲಿ ಸ್ವಪಕ್ಷೀಯರ ನಡುವೆ ನಡೆಯುತ್ತಿರುವ ಪರ-ವಿರೋಧದ ವಾಕ್ಸಮರದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಅರಿತ ಹೈಕಮಾಂಡ್ ಮಧ್ಯಪ್ರವೇಶಿಸಿ ಡ್ಯಾಮೇಜ್ ಕಂಟ್ರೋಲ್ಗೆ ಯತ್ನಿಸುತ್ತಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಮುಖಂಡರು ಪರಸ್ಪರ ಟೀಕೆ ಪ್ರತಿ ಟೀಕೆಗಳಲ್ಲಿ ತೊಡಗಿರುವುದು ಬಿಜೆಪಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸೂಕ್ಷ್ಮವಾಗಿ ಈ ವಿಚಾರವನ್ನು ನಿಭಾಯಿಸಬೇಕೆನ್ನುವ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ.
ಮೀಸಲಾತಿ ವಿಚಾರವಾಗಿ ಯತ್ನಾಳ್ ಜೊತೆ ಚರ್ಚಿಸಿ ಈ ಬಗ್ಗೆ ಸಮಾಲೋಚಿಸುವ ಇಂಗಿತವನ್ನು ಕಮಲದ ಹೈಕಮಾಂಡ್ ವ್ಯಕ್ತಪಡಿಸಿದೆ. ಮೀಸಲಾತಿ ನೀಡುವ ಸಂಬಂಧ ಬಿಜೆಪಿ ಹೈಕಮಾಂಡ್ ತಮ್ಮ ಬಳಿ ಮಾತನಾಡಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನುವುದನ್ನು ಯತ್ನಾಳ್ ಖಚಿತಪಡಿಸಿದ್ದಾರೆ.
ದಕ್ಷಿಣ ಸಿಯೋಲ್ ಬೆಂಕಿ ಅವಗಡ, 500ಕ್ಕೂ ಹೆಚ್ಚು ಜನರ ಸ್ಥಳಾಂತರ
ಈ ಬೆಳವಣಿಗೆ ನಡುವೆ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಬಸವರಾಜ ಬೊಮ್ಮಾಯಿ ಅವರು, ಬಸನಗೌಡ ಪಾಟೀಲ್ ಯತ್ನಾಳ್ ನಡೆವಳಿಕೆ ಬಿಜೆಪಿ ಸರ್ಕಾರ ಮತ್ತು ಪಕ್ಷದ ಮೇಲೆ ಗಾಢ ಪರಿಣಾಮ ಉಂಟಾಗುತ್ತಿದೆ ಎಂಬ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
BJP, decide, soon, action, against , MLA Basanagouda Yatnal,