ಬೆಂಗಳೂರು, ಆ.2- ಕಾರ್ಯಕರ್ತರ ವಿರುದ್ಧವೇ ಅಸಡ್ಡೆಯಿಂದ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ಧೋರಣೆಯನ್ನು ಕಾಂಗ್ರೆಸ್ ಲೇವಡಿ ಮಾಡಿದ್ದು, ಬಿಜೆಪಿಗೆ ಬೇಕಿರುವುದು ಕಾರ್ಯಕರ್ತರಲ್ಲ, ಕಾರ್ಯಕರ್ತರ ಶವ ಮಾತ್ರ ಎಂದಿದೆ.
ಬಿಜೆಪಿಗೆ ಬಿಜೆಪಿಯೇ ಎದುರಾಳಿ ಎಂಬ ಹ್ಯಾಸ್‍ಟ್ಯಾಗ್ ಮೂಲ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕ ಈಶ್ವರಪ್ಪನವರ ನಂತರ ಈಗ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಸರದಿ. ತಮ್ಮದೇ ಕಾರ್ಯಕರ್ತರನ್ನು ಅವಮಾನಿಸುವ ಏಕೈಕ ಪಕ್ಷ ವ್ಯಂಗ್ಯವಾಡಿದೆ.
ಬಿಜೆಪಿ 11 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದ್ದು, ಯುವ ಕಾರ್ಯಕರ್ತರು ರಾಜೀನಾಮೆ ಕೊಟ್ಟಾಕ್ಷಣ ಪಕ್ಷವೇನು ಮುಳುಗಿ ಹೋಗುವುದಿಲ್ಲ ಎಂದಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ ನೀಡಿದ್ದರು. ಕಾರ್ಯಕರ್ತರು ರಾಜೀನಾಮೆ ಕೊಟ್ಟರೆ ಕೊಡಲಿ ಎನ್ನುವ ಬಿಜೆಪಿಯ ಅಸಲಿ ಧೋರಣೆ ಕಾರ್ಯಕರ್ತರು ಸತ್ತರೆ ಸಾಯಲಿ ಎನ್ನುವುದಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಾಲೆಯಲ್ಲಿ ಮೊಟ್ಟೆ ಬದಲು ಬಾಳೆಹಣ್ಣು ವಿತರಿಸಿರುವುದಕ್ಕೆ ಕಾಂಗ್ರೆಸ್ ಲೇವಡಿ ಮಾಡಿದೆ. ಹೆಸರಿಗೆ ಮಾತ್ರ ಮೊಟ್ಟೆ ವಿತರಣೆ ಕಾರ್ಯಕ್ರಮ. ಆದರೆ ನೀಡಿದ್ದು ಮಾತ್ರ ಬಾಳೆಹಣ್ಣು.
ಗೋವಿಂದ್ ಕಾರಜೋಳರಿಗೆ ಮೊಟ್ಟೆ ಮುಟ್ಟಲು ಅಸಹ್ಯವೇ ? ಅಥವಾ ಮೊಟ್ಟೆ ನೀಡಲು ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದೆ. ಸರ್ಕಾರ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಹಾಗೂ ಪೌಷ್ಟಿಕತೆಯ ಬೆಳವಣಿಗೆಯ ಬಗ್ಗೆ ಕಿಂಚಿತ್ ಕಾಳಜಿ ಇಲ್ಲದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.