ನವದೆಹಲಿ,ಆ.17- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ಮೂಲಕ ಉನ್ನತ ಗೌರವ ನೀಡಿದೆ. ಈ ಮೂಲಕ 2023ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು, ಪಕ್ಷದಲ್ಲಿ ಬಿಎಸ್‍ವೈ ಅವರನ್ನು ಕಡೆಗಣಿಸಲಾಗುತ್ತದೆ ಎಂಬ ಆರೋಪಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ.
ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿಯನ್ನು ಪುನಾರಚನೆ ಮಾಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. 11 ಸದಸ್ಯರ ಪಟ್ಟಿಯಲ್ಲಿ ಬಿಎಸ್‍ವೈಗೆ 5ನೇ ಸ್ಥಾನ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಜೊತೆಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವುದು, ಚುನಾವಣಾ ರಣತಂತ್ರ ರೂಪಿಸುವುದು, ಬಜೆಟ್ ಸಿದ್ದಪಡಿಸುವುದು ಸೇರಿದಂತೆ ಮತ್ತಿತರ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ 15 ಮಂದಿ ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪನವರಿಗೆ ಸ್ಥಾನ ನೀಡಲಾಗಿದೆ.
ಬಿಜೆಪಿ ನೀತಿ, ಸಿದ್ದಾಂತಗಳು ಹಾಗೂ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರ ಸಂಸದೀಯ ಮಂಡಳಿಗೆ ಮಾತ್ರ ಇದೆ. ಈ ಸಮಿತಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಉನ್ನತ ನಾಯಕರನ್ನೊಳಗೊಂಡ ಮಂಡಳಿ ಇದಾಗಿದೆ.
ಅದನ್ನು ಈಗ ಪುನಾರಚಿಸಲಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ಥಾನ ಕಲ್ಪಿಸಿರುವುದು ರಾಜ್ಯ ರಾಜಕಾರಣದಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ. ಬುಧವಾರ ಹೊಸದಾಗಿ ಸಂಸದೀಯ ಮಂಡಳಿಯನ್ನು ಪುನಾರಚನೆ ಮಾಡಲಾಗಿದ್ದು, ಸಂಸದೀಯ ಮಂಡಳಿಗೆ ಹೊಸದಾಗಿ 11 ಸದಸ್ಯರನ್ನು ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗತ್ತಿದೆ ಎಂದು ಪ್ರತಿಪಕ್ಷಗಳು ಹುಯಿಲೆಬ್ಬಿಸಿದ್ದವು. ಇದಕ್ಕೆ ಬಿಜೆಪಿ ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನದ ಮೂಲಕ ಕಾಂಗ್ರೆಸ್‍ಗೆ ತಿರುಗೇಟು ನೀಡಿದೆ.
ಈ ಮೊದಲು ಕೇಂದ್ರದ ಸಚಿವರಾಗಿದ್ದ ಅನಂತಕುಮಾರ್ ಅವರು ಸಂಸದೀಯ ಮಂಡಳಿಯ ಸದಸ್ಯರಾಗಿದ್ದರು. ಅವರ ನಿಧನದ ಬಳಿಕ ಸಂಸದೀಯ ಮಂಡಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ನೇಮಕ ಮಾಡಲಾಗಿತ್ತು.
ತದನಂತರ ಶಾಸಕ ಸಿ.ಟಿ.ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ ನಂತರ ಕರ್ನಾಟಕಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಸ್ಥಾನ ಲಭ್ಯವಾಗಿದೆ. ಇವರಲ್ಲಿ ನಿತಿನ್‍ಗಡ್ಕರಿ ಮತ್ತು ಶಿವರಾಜ್ ಸಿಂಗ್ ಚಹ್ವಾಣ್ ಅವರನ್ನು ಬದಲಾವಣೆ ಮಾಡಿ ಯಡಿಯೂರಪ್ಪ ಹಾಗೂ ಮತ್ತಿತರರಿಗೆ ಅವಕಾಶ ಕಲ್ಪಿಸಲಾಗಿದೆ.
ಚುನಾವಣೆಗೆ ಕಹಳೆ: 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವೀರಶೈವ ಲಿಂಗಾಯಿತ ಸಮುದಾಯದ ಪರಮ್ಮೋಚ್ಚ ನಾಯಕ ಯಡಿಯೂರಪ್ಪನವರಿಗೆ ಈ ಸ್ಥಾನವನ್ನು ಕಲ್ಪಿಸಲಾಗಿದೆ ಎಂದು ಹೇಳಲಾಗುತ್ತದೆ.
ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸಿದ ನಂತರ ಬಿಜೆಪಿಗೆ ಬೆನ್ನೆಲುಬಾಗಿದ್ದ ವೀರಶೈವ ಲಿಂಗಾಯಿತ ಮತಗಳು ಕೈ ತಪ್ಪಿ ಕಾಂಗ್ರೆಸ್ ಕಡೆ ಹೋಗಬಹುದೆಂಬ ಆತಂಕವಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ನಡೆದಿದ್ದ ಉಪಚುನಾವಣೆ, ಬೆಳಗಾವಿ ಲೋಕಸಭೆ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ.
ಅದರಲ್ಲೂ ಲಿಂಗಾಯಿತ ಪ್ರಾಬಲ್ಯವಿರುವ ಹಾನಗಲ್, ಮಾನ್ವಿ, ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಹಿನ್ನಡೆ ಅನುಭಿಸಿತ್ತು. ಪ್ರತಿಪಕ್ಷಗಳು ಕೂಡ ಯಡಿಯೂರಪ್ಪನವರನ್ನು ವರಿಷ್ಠರು ಕಣ್ಣೀರು ಬರಿಸುವಂತೆ ಮಾಡಿದ್ದಾರೆ ಎಂದು ತುಪ್ಪ ಸುರಿಯುತ್ತಿದ್ದರು. ಈ ನಿಟ್ಟಿನಲ್ಲಿ ಉನ್ನತ ಸ್ಥಾನವನ್ನೇ ನೀಡಲಾಗಿದೆ.
# ಸಂಸದೀಯ ಮಂಡಳಿ ಸದಸ್ಯರು:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ
ಪ್ರಧಾನಿ ನರೇಂದ್ರಮೋದಿ
ಸಚಿವ ರಾಜನಾಥ ಸಿಂಗ್
ಸಚಿವ ಅಮಿತ್ ಷಾ
ಬಿ.ಎಸ್.ಯಡಿಯೂರಪ್ಪ
ಸರ್ಬಾನಂದ್ ಸೋನೆವಾಲ
ಕೆ.ಲಕ್ಷ್ಮಣ
ಇಕ್ಬಾಲ್ ಸಿಂಗ್ ಲಾಲ್‍ಪುರ್
ಸುಧಾ ಯಾದವ್
ಸತ್ಯ ನಾರಾಯಣ ಜಟಿಯ
ಬಿ.ಎಲ್.ಸಂತೋಷ್
ಕೇಂದ್ರ ಚುನಾವಣಾ ಸಮಿತಿ ಸದಸ್ಯರು:
ಜೆ.ಪಿ.ನಡ್ಡ
ನರೇಂದ್ರಮೋದಿ
ರಾಜನಾಥ ಸಿಂಗ್
ಸಚಿವ ಅಮಿತ್ ಷಾ
ಬಿ.ಎಸ್.ಯಡಿಯೂರಪ್ಪ
ಸರ್ಬಾನಂದ್ ಸೋನೆವಾಲ
ಕೆ.ಲಕ್ಷ್ಮಣ
ಇಕ್ಬಾಲ್ ಸಿಂಗ್ ಲಾಲ್‍ಪುರ್
ಸುಧಾ ಯಾದವ್
ಸತ್ಯ ನಾರಾಯಣ ಜಟಿಯ
ಭುಪೇಂದ್ರ ಯಾದವ್
ದೇವೇಂದ್ರ ಫಡ್ನವೀಸ್
ಓಂ ಮಾಥುರ್
ಬಿ.ಎಲ್.ಸಂತೋಷ್
ವನತಿ ಶ್ರೀನಿವಾಸ್