ಪ್ರವೀಣ್ ಹತ್ಯೆ ತನಿಖೆ 2 ದಿನದಲ್ಲಿ NIAಗೆ ಹಸ್ತಾಂತರ : ಸಿಎಂ

Social Share

ಬೆಂಗಳೂರು,ಆ.1- ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಬಿಜೆಪಿ ಯುವ ನಾಯಕ ಪ್ರವೀಣ್ ನಟ್ಟಾರು ಹತ್ಯೆ ಪ್ರಕರಣವನ್ನು ಎರಡುಮೂರು ದಿನದೊಳಗೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪ್ರವೀಣ್ ನಟ್ಟಾರು ಕೊಲೆ ಪ್ರಕರಣವನ್ನು ಕೇವಲ ಔಪಚಾರಿಕವಾಗಿ
ಎನ್‍ಐಎಗೆ ವಹಿಸುವುದಾಗಿ ಹೇಳಿದ್ದೆ. ಎರಡು ಮೂರು ದಿನದೊಳಗೆ ಇದನ್ನು ಅಧಿಕೃತವಾಗಿ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.

ಯಾವುದೇ ಒಂದು ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರ ಮಾಡಬೇಕಾದರೆ ಕೆಲವು ವಿಧಿವಿಧಾನಗಳು ಇರುತ್ತವೆ. ಅದನ್ನು ಪೂರೈಸಿದ ನಂತರವೇ ನಾವು ವರ್ಗಾಯಿಸಬೇಕು. ತಾಂತ್ರಿಕ ಕಾರಣಗಳಿಂದ ತುಸು ವಿಳಂಬವಾಗಿದೆ. ಎರಡು-ಮೂರು ದಿನದಲ್ಲಿ ಇದು ಹಸ್ತಾಂತರವಾಗಲಿದೆ ಎಂದರು.

ಪ್ರವೀಣ್ ನಟ್ಟಾರ್ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಪೊಲೀಸರು ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆದಷ್ಟು ಶೀಘ್ರ ಕೊಲೆ ಆರೋಪಿಗಳನ್ನು ತನಿಖಾಕಾಧಿರಿಗಳು ಬಂಧಿಸುತ್ತಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈಗಾಗಲೇ ತನಿಖೆ ಸಾಕಷ್ಟು ಪ್ರಗತಿ ಕಂಡಿದೆ. ನಮ್ಮ ಪೊಲೀಸರು ಮಂಗಳೂರು ಮತ್ತು ಕೇರಳ ಭಾಗಕ್ಕೆ ತೆರಳಿ ಕೆಲವು ಮಾಹಿತಿಯನ್ನು ಕಲೆ ಹಾಕಿದ್ದಾರೆ. ತನಿಖೆಯ ದೃಷ್ಟಿಯಿಂದ ನಾವು ಇದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಎನ್‍ಐಎನ ಒಂದು ತಂಡ ಮಂಗಳೂರು ಹಾಗೂ ಕೇರಳಕ್ಕೆ ಹೊಂದಿಕೊಂಡಿರುವ ಗಡಿಭಾಗಕ್ಕೆ ಆಗಮಿಸಿ ಮಾಹಿತಿಯನ್ನು ಕಲೆ ಹಾಕುತ್ತಿದೆ. ತಾಂತ್ರಿಕ ಮತ್ತು ದಾಖಲೆಗಳ ಹಸ್ತಾಂತರ ಪ್ರಕ್ರಿಯೆಯು ಬೇಗ ಮುಗಿಯಲಿದೆ ಎಂದರು.

ಮಂಗಳೂರಿನಲ್ಲಿ ಕೊಲೆಯಾದ ಫಾಜಿಲ್ ಮತ್ತು ಮಸೂದ್ ಮನೆಗೆ ಭೇಟಿ ನೀಡಿ ಅವರ ಪೋಷಕರನ್ನು ಭೇಟಿ ಮಾಡಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಆದಷ್ಟು ಶೀಘ್ರ ಈ ಎರಡೂ ಮನೆಗಳಿಗೂ ಭೇಟಿ ಕೊಡುತ್ತೇನೆ ಎಂದು ಹೇಳಿದರು.

ನಾನು ದುರುದ್ದೇಶಪೂರ್ವಕವಾಗಿ ಭೇಟಿ ಕೊಟ್ಟಿಲ್ಲ. ಸಮಯದ ಕೊರತೆಯಿಂದಾಗಿ ತಡವಾಗಿದೆ. ಬರುವ ದಿನಗಳಲ್ಲಿ ಖಂಡಿತವಾಗಿಯೂ ಮಸೂದ್ ಮತ್ತು ಫಾಸಿಲ್ ಮನೆಗೆ ಭೇಟಿ ಕೊಟ್ಟು ಅವರ ತಂದೆ ತಾಯಿಗಳಿಗೆ ಸಾಂತ್ವಾನ ಹೇಳುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನೋತ್ಸವದ ಕುರಿತು ನಮ್ಮ ಮನೆ ದೇವರು ಕೂಡ ಸಿದ್ದರಾಮೇಶ್ವರ. ನಾವು ಕೂಡ ಸಿದ್ದರಾಮೇಶ್ವರ ಭಕ್ತರು. ಅವರ ಜಯಂತಿ ಆಚರಣೆ ಮಾಡಿಕೊಳ್ಳುತ್ತಿರುವುದಕ್ಕೆ ನಮ್ಮಿಂದ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ದಾವಣಗೆರೆಯಲ್ಲಿ ನಡೆಯಿಲಿರುವ ಅಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ಅವರ ಜಯಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. ಆ.3ರಂದು ಕಾರ್ಯಕ್ರಮ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.

ಪಕ್ಷದ ವತಿಯಿಂದ ಜನೋತ್ಸವ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರ ಜೊತೆ ಸಮಾಲೋಚಿಸಿ ಸಮಾವೇಶಗಳನ್ನು ನಡೆಸುತ್ತೇವೆ. ಈ ಬಗ್ಗೆ ಪಕ್ಷದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇವತ್ತು ನಾನು ಕೊಪ್ಪಳ ಪ್ರವಾಸ ಮಾಡುತ್ತಿದ್ದೇನೆ. ಅಂಜನಾದ್ರಿ ಬೆಟ್ಡದ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇನೆ. ಇವತ್ತುಸಮಗ್ರ ಅಭಿವೃದ್ಧಿ ಸ್ಥಳ ವೀಕ್ಷಣೆ ಮಾಡುತ್ತಿದ್ದು, ಕಾಮಗಾರಿಯನ್ನು ಶೀಘ್ರವೇ ಆರಂಭಿಸುವ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

Articles You Might Like

Share This Article