ಬೆಂಗಳೂರು, ಮಾ.9- ಬಜೆಟ್‌ನಲ್ಲಿ 430ರ ಬದಲಾಗಿ, 420 ಅಂಶಗಳನ್ನು ನಮೂದಿಸಬೇಕಿತ್ತು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದರಿಂದ ವಿಧಾನ ಪರಿಷತ್ ಕಲಾಪದಲ್ಲಿ ಮಾತಿನ ಚಕಮಕಿ ನಡೆಯಿತು.
ಬಜೆಟ್ ಮೇಲೆ ಚರ್ಚೆಯ ನಡುವೆ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕರ ಹೇಳಿಕೆಗಳನ್ನು ತರಾಟೆಗೆ ಹರಿಪ್ರಸಾದ್, ವಿಪ್ರೋ, ಇನ್ಫೋಸಿಸ್, ಟಾಟಾ ಕಂಪೆನಿಗಳು ದೇಶದ ಆಸ್ತಿ ಅವುಗಳ ಕೊಡುಗೆ ಅಪಾರ, ಆದರೆ ಅವುಗಳ ಮುಖ್ಯಸ್ಥರನ್ನು ರಾಜಕೀಯ ಕಾರಣಕ್ಕೆ ಟೀಕಿಸಲಾಗಿದೆ. ದಾನ ಧರ್ಮದಲ್ಲಿ ಎತ್ತಿದ ಕೈ ಆಗಿರುವ ಅಜೀಂ ಪ್ರೇಮ್ ಜೀ ಅವರ ಹೆಸರನ್ನೇ ಹೇಳುವುದಿಲ್ಲ. ಟಾಟಾ ಕಂಪೆನಿಯ ರತನ್ ಟಾಟಾ ಸೇರಿದಂತೆ ಹಲವರನ್ನು ದೇಶದ್ರೋಹಿಗಳು ಎಂದು ಟೀಕಿಸಲಾಗಿದೆ ಎಂದು ದೂರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಬಿಜೆಪಿ ರವಿಕುಮಾರ್, ವೈ.ಎ.ನಾರಾಯಣಸ್ವಾಮಿ, ಪ್ರಾಣೇಶ್ ಮತ್ತಿತರರು ಟಾಟಾ ಕಂಪೆನಿ ದೇಶದ ಹೆಮ್ಮೆ. ಅದನ್ನು ಯಾರು ಟೀಕಿಸಿಲ್ಲ. ನೀವು ತಪ್ಪು ಮಾಹಿತಿ ನೀಡಬೇಡಿ. ಯಾರು ಟೀಕೆ ಮಾಡಿದ್ದಾರೆ ಎಂದು ಹೆಸರು ಹೇಳಿ ಎಂದು ಒತ್ತಾಯಿಸಿದರು.
ಪದೇ ಪದೇ ಒತ್ತಾಯಗಳು ಕೇಳಿ ಬಂದಾಗ ಹರಿಪ್ರಸಾದ್ ಅವರು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಟಾಟಾ ಕಂಪೆನಿಯನ್ನು ಟೀಕಿಸಿದ್ದಾರೆ ಎಂದರು. ಅದಕ್ಕೆ ತಕ್ಕ ದಾಖಲೆ ನೀಡಿ ಇಲ್ಲ ಕ್ಷಮೆ ಕೇಳಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.
ನಾನು ಹೆಸರು ಹೇಳುವ ಉದ್ದೇಶ ಹೊಂದಿರಲಿಲ್ಲ. ಆದರೆ ಬಿಜೆಪಿಯ ಸದಸ್ಯರು ಒತ್ತಾಯ ಮಾಡಿದ್ದರಿಂದ ಹೇಳಿದ್ದೇನೆ. ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸುತ್ತೇನೆ. ಇಲ್ಲವಾದರೆ ನನ್ನ ಮಾತುಗಳನ್ನು ಕಡತದಿಂದ ತೆಗೆಯಿರಿ ಎಂದು ಸಭಾಪತಿ ಅವರಲ್ಲಿ ಮನವಿ ಮಾಡಿದರು. ಅದಕ್ಕೆ ಸಭಾಪತಿ ಅವರು ಸಹಮತ ವ್ಯಕ್ತ ಪಡಿಸಿದರು.
ಬಜೆಟ್ ನಲ್ಲಿ ಅಂಶಗಳ ಪ್ರಮಾಣಗಳ ಬಗ್ಗೆಯೂ ಚರ್ಚೆ ನಡೆಯಿತು. ಹರಿಪ್ರಸಾದ್ ಅವರು, ಮುಖ್ಯಮಂತ್ರಿಯವರು 430 ಅಂಶಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಅದು 420 ಆಗಬೇಕಿತ್ತು ಎಂದರು.ಇದಕ್ಕೆ ರವಿಕುಮಾರ್, ಆಯನೂರು ಮಂಜುನಾಥ್ ಮತ್ತಿತರರು ಆಕ್ಷೇಪ ವ್ಯಕ್ತ ಪಡಿಸಿದರು.
ಹಿರಿಯರು, ಅನುಭವಿಗಳು ಆಗಿರುವ ಹರಿಪ್ರಸಾದ್ ಅವರ ಮಾತುಗಳನ್ನು ಕೇಳಲು ನಾವೇಲ್ಲಾ ಕುಳಿತಿದ್ದೇವೆ. ಅದರೆ ಅವರು ತಮ್ಮ ಘನತೆ ಮರೆತು ಹಗುರವಾಗಿ, ವ್ಯಂಗ್ಯಗಳನ್ನು ಮಾಡಬಾರದು ಎಂದು ಸಭಾನಾಯಕರು ಸೇರಿದಂತೆ ಅನೇಕ ಸದಸ್ಯರು ಆಕ್ಷೇಪಿಸಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನಚಕಮಕಿ ನಡೆಯಿತು. ನೀವು ಹೇಳಿದಂತೆ ಮಾತನಾಡಲು ನಾನು ಇಲ್ಲಿಗೆ ಬಂದಿಲ್ಲ,. ಮಾತನಾಡುವ ಅಧಿಕಾರ ನನಗೆ ಇದೆ. ನೀವು ಮಾತನಾಡುವಾಗ ಅದಕ್ಕೆ ಉತ್ತರ ಕೊಡಿ. ಹರಿಪ್ರಸಾದ್ ಮಾತನಾಡಲು ಬಿಡಬೇಡಿ ಎಂದು ಬಿಜೆಪಿ ಅಧ್ಯಕ್ಷರು ಸದಸ್ಯರಿಗೆ ತಾಕೀತು ಮಾಡಿದ್ದಾರೆ. ಅದಕ್ಕೆ ಅಡ್ಡಿ ಪಡಿಸುವ ಅಜೆಂಡಾವನ್ನು ನೀವು ಹೊಂದಿದ್ದರೆ ಹೇಳಿ ಬಿಡಿ, ನಾವು ನೋಡಿಕೊಳ್ಳುತ್ತೇವೆ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು.
ನೇರವಾಗಿ ಚುನಾವಣೆಯಲ್ಲಿ ಗೆಲ್ಲದೆ ಹಿಂಬಾಗಿಲ ಮೂಲಕ ರಾಜಕಾರಣ ಮಾಡುವವರು ಎಂದು ಆಯನೂರು ಮಂಜುನಾಥ್ ಲೇವಡಿ ಮಾಡಿದಾಗ, ನಾನು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ನನ್ನ ಜಾತಿಯ ನೂರು ಮತದಾರರು ಇರಲ್ಲ. ಹಣ ಮತ್ತು ಜಾತಿ ಬಳಕೆ ಮಾಡಿ ಚುನಾವಣೆ ಮಾಡುವ ಕ್ರಿಮಿನಲ್ ನಾನಲ್ಲ. ಅವನ್ನು ಬಿಟ್ಟು ಬನ್ನಿ ನೋಡೋಣ ಎಂದು ಸವಾಲೆಸೆದರು.
ನಾನು ಯಾವುದಕ್ಕೂ ಬೆನ್ನು ತೋರಿಸುವುದಿಲ್ಲ. ಸ್ಪರ್ಧೆ ಮಾಡುತ್ತೇನೆ. ಸೋಲುತ್ತೇನೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧೆ ಮಾಡದೆ ನೇರವಾಗಿ ಮುಖ್ಯಮಂತ್ರಿಯಾದವನು, ಪ್ರಧಾನಿಯಾದವನು ನಾನಲ್ಲ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.
