ಬಿಎಲ್ ಸಂತೋಷ್ ವಿರುದ್ಧ ಕಾಂಗ್ರೆಸ್ ಟ್ವೀಟ್‍ : ಕಮಲ ನಾಯಕರು ಕೆಂಡ

Social Share

ಬೆಂಗಳೂರು,ಜು.19- ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಕಾಂಗ್ರೆಸ್ ಮಾಡಿರುವ ಟ್ವೀಟ್‍ಗೆ ಕಮಲ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಸಚಿವರಾದ ಡಾ. ಸುಧಾಕರ್, ಅಶ್ವತ್ಥ್ ನಾರಾಯಣ್, ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಬಿ.ಸಿ ನಾಗೇಶ್,ಕೆ ಗೋಪಾಲಯ್ಯ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಟ್ವೀಟ್‍ಗೆ ತಿರುಗೇಟು ನೀಡಿದ್ದಾರೆ.

ಬಿ.ಎಲ್.ಸಂತೋಷ್ ಅವರನ್ನು ಬಿಟ್ಟುಕೊಡದ ಸಚಿವರು, ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದು, ಟ್ವೀಟ್ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.

ಸಚಿವ ಡಾ.ಸುಧಾಕರ್: ಒಂದು ಕುಟುಂಬದ ಪ್ರೈವೇಟ್ ಕಂಪೆನಿಯಾಗಿ ಹೈಕಮಾಂಡ್ ಸಂಸ್ಕೃತಿಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವ, ತಳಸ್ಪರ್ಶೀ ಸಂಘಟನೆ ಇವೆಲ್ಲವೂ ಮರೀಚಿಕೆಯಾಗಿರುವುದು ಅಚ್ಚರಿಯೇನಲ್ಲ. ಬಿಜೆಪಿ ಕೇವಲ ಅಧಿಕಾರಕ್ಕಾಗಿ ಕಟ್ಟಿರುವ ರಾಜಕೀಯ ಪಕ್ಷವಲ್ಲ, ಸಮಾಜಿಕ ಪರಿವರ್ತನೆಯ ಗುರಿಯುಳ್ಳ ಶಿಸ್ತು, ಬದ್ಧತೆಯ ಸಂಘಟನೆ ಎಂದಿದ್ದಾರೆ.

ಅಂದಿನ ಯುಪಿಎ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಹರಿದು ಹಾಕಿ ಪ್ರಧಾನಮಂತ್ರಿಗಳಿಗೆ ಅಗೌರವ ತೋರಿದ್ದು ಯಾರು ಎಂದು ಜನ ಇನ್ನೂ ಮರೆತಿಲ್ಲ. ಎನ್‍ಸಿಎ ಎಂಬ ಅಸಂವಿಧಾನಿಕ ಸಂಸ್ಥೆ ಕಟ್ಟಿಕೊಂಡು ರಿಮೋಟ್ ರಾಜ್ಯಭಾರ ಮಾಡುವ ಮೂಲಕ ಪ್ರಧಾನಿ ಹುದ್ದೆಯನ್ನು ನಗೆಬಾಟಲು ಮಾಡಿದ್ದು ಯಾರು ಎಂದು ಬಿಡಿಸಿ ಹೇಳಬೇಕೆ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಪಕ್ಷದಲ್ಲಿ ಎಲ್ಲರಿಗೂ ತಮ್ಮದೇ ಆದ ನಿರ್ದಿಷ್ಟ ಜವಾಬ್ದಾರಿ, ಹೊಣೆಗಾರಿಕೆ ಇದೆ. ಇಂತಹ ಶಿಸ್ತುಬದ್ಧ ಸಂಘಟನೆಯಿಂದಲೇ ಬಿಜೆಪಿ ಇಂದು ಕೋಟ್ಯಂತರ ಕಾರ್ಯಕರ್ತರ ಪಡೆ ಕಟ್ಟಿಕೊಂಡು ದೇಶಾದ್ಯಂತ ಜನರ ವಿಶ್ವಾಸ, ಆಶೀರ್ವಾದ ಗಳಿಸಿದೆ. ಯಾವುದೇ ನಾಯಕತ್ವವೆ, ದಿಕ್ಕುದೆಸೆ ಇಲ್ಲದ ಕಾಂಗ್ರೆಸ್‍ಗೆ ಇದ್ಯಾವುದೂ ಅರ್ಥವಾಗುವುದೂ ಇಲ್ಲ ಎಂದು ಟೀಕಿಸಿದ್ದಾರೆ.

ಆಶ್ವಥ್ ನಾರಾಯಣ್: ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬವೇ ವಿಶ್ವವಿದ್ಯಾಲಯ, ಸೋನಿಯಾ ಅವರೇ ಚಾನ್ಸಲರ್, ಪಪ್ಪು-ಪ್ರಿಯಾಂಕಾರೇ ಉಪನ್ಯಾಸಕರು! ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರಂತಹ ಪುಂಡ ವಿದ್ಯಾರ್ಥಿಗಳ ಕಿತ್ತಾಟವನ್ನೇ ತಡೆಯಲಾಗದವರು ಶಿಸ್ತು, ಸಂಯಮಕ್ಕೆ ಹೆಸರಾಗಿರುವ ಬಿಜೆಪಿ ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.

ಆರಗ ಜ್ಞಾನೇಂದ್ರ: ಪ್ರಜಾಪ್ರಭುತ್ವದ ಅರಿವೆಯೇ ಇಲ್ಲದೆ ಒಂದು ಕುಟುಂಬದ ಗುಲಾಮಗಿರಿಗೆ ಹೊಂದಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ, ಬಿಜೆಪಿಯ ಸಂಘಟನಾ ನೀತಿಗಳು ಅರ್ಥವಾಗುವುದಿಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷ. ಪ್ರತಿಯೊಬ್ಬರಿಗೂ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆ ಇರುವ ಶಿಸ್ತುಬದ್ಧ ಪಕ್ಷ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಿ.ಸಿ.ನಾಗೇಶ್ ಟ್ವೀಟ್: ದಶಕಗಳ ಹಿಂದೆಯೇ ನಕಲಿ ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷವನ್ನು ಬರೆದುಕೊಟ್ಟು, ಆತ್ಮಸಾಕ್ಷಿ ಮರೆತಿರುವ ವ್ಯಕ್ತಿ ನಿಷ್ಠರೇ, ಜವಾಬ್ದಾರಿಯುತ ರಾಜಕೀಯ ಪಕ್ಷವೊಂದರ ಸಾಂಸ್ಥಿಕ ರಚನೆ, ಕಾರ್ಯ ವೈಖರಿ, ಶಿಸ್ತು, ಸಂಘಟನೆಯ ಆಳ, ಅಗಲವನ್ನು ಅರಿಯದ ಕಾರಣ ನಿಮ್ಮ ಪಕ್ಷ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟರ್‍ನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಗೆಲ್ಲದ, ಗೆಲ್ಲಲಾಗದ ಬಿ.ಎಲ್.ಸಂತೋಷ್ ಎಂಬ ವ್ಯಕ್ತಿ ಸಂಪುಟ ಸಚಿವರಿಗೆ ಹೆಡ್‍ಮಾಸ್ಟರ್‍ನಂತೆ ಕ್ಲಾಸ್ ತೆಗೆದುಕೊಳ್ಳುವುದು ಬಿಜೆಪಿಯ ದುರಂತ. ಸಿಎಂ ಬೊಮ್ಮಾಯಿಯವರೊ, ಬಿ.ಎಲ್ ಸಂತೋಷ್ ಅವರೊ ಸ್ಪಷ್ಟಪಡಿಸಿಕೊಂಡು ಬಿಜೆಪಿ ಆಡಳಿತ ನಡೆಸಲಿ. ಬೊಮ್ಮಾಯಿಯವರು ಕೇವಲ ಬೊಂಬೆಯೇ ಹೇಳಲಿ ಎಂದು ಚಿಂತನ ಮಂಥನ ಸಭೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಗಿ ಟ್ವೀಟ್ ಮಾಡಿತ್ತು.

Articles You Might Like

Share This Article