ಕೇರಳಕ್ಕೆ ಬ್ಲಾಕ್ ಫ್ರೈಡೇ : ಎರಡು ಭೀಕರ ದುರಂತಗಳಲ್ಲಿ 40ಕ್ಕೂ ಹೆಚ್ಚು ಸಾವು..!

Spread the love

ಕೋಳಿಕೋಡ್/ಇಡುಕ್ಕಿ, ಆ.8-ಕೇರಳಕ್ಕೆ ನಿನ್ನೆ ಕರಾಳ ಶುಕ್ರವಾರ. ಕೋಳಿಕೋಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ನಿನ್ನೆ ಸಂಭವಿಸಿದ ವಿಮಾನ ದುರಂತ ಮತ್ತು ಭೂಕುಸಿತದ ದುರ್ಘಟನೆಗಳಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕೇರಳದ ವಿವಿಧ ಜಿಲ್ಲೆಗಳು ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ನಿನ್ನೆ ತತ್ತರಿಸಿ ಸಾವು-ನೋವು ವರದಿಯಾಗಿರುವಾಗಲೇ ನಿನ್ನೆ ರಾತ್ರಿ ಕೋಳಿಕೋಡ್ (ಕ್ಯಾಲಿಕಟ್ ಅಥವಾ ಕಲ್ಲಿಕೋಟೆ) ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‍ಪೆಸ್ ವಿಮಾನ ಭೂ ಸ್ಪರ್ಶದ ವೇಳೆ ರನ್‍ವೇನಿಂದ ಜಾರಿ ಎರಡು ಹೋಳಾಯಿತು.

ಈ ದುರ್ಘಟನೆಯಲ್ಲಿ ಇಬ್ಬರು ಪೈಲೆಟ್‍ಗಳೂ ಸೇರಿದಂತೆ 20 ಮಂದಿ ಮೃತಪಟ್ಟು ಇತರ 190 ಪ್ರಯಾಣಿಕರು ಗಾಯಗೊಂಡರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

# ಬೆಟ್ಟ ಕುಸಿತ ದುರಂತ :
ಕುಂಭ್ರದ್ರೋಣ ಮಳೆಯಿಂದ ಕೇರಳ ತತ್ತರಿಸಿದ್ದು, ಇಡುಕಿ ಜಿಲ್ಲೆಯ ಮನ್ನಾರ್ ಪರ್ವತಸ್ತೋಮದ ಹಲವೆಡೆ ನಿನ್ನೆ ನಸುಕಿನಲ್ಲಿ ಭೂಕುಸಿತಗಳು ಸಂಭವಿಸಿದ್ದು, 20ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡರು.

ಈ ದುರ್ಘಟನೆಯಲ್ಲಿ ಸುಮಾರು 50 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. . ಗುಡ್ಡ ಮತ್ತು ಭೂಕುಸಿತಗಳಿಂದಾಗಿ ಕಣ್ಣನ್ ದೇವನ್ ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದೇ ಕುಟುಂಬದ 80ಕ್ಕೂ ಹೆಚ್ಚು ಕಾರ್ಮಿಕರು ಮಣ್ಣಿನ ಆವಶೇಷಗಳಡಿ ಸಿಲುಕಿದರು.

ಈವರೆಗೆ 20 ಶವಗಳನ್ನು ಹೊರ ತೆಗೆಯಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇಡುಕ್ಕಿ ಜಿಲ್ಲೆಯ ರಾಜಮಾಲಾ ಮತ್ತು ಮನ್ನಾರ್ ಪರ್ವತ ಶ್ರೇಣಿಯ ಪೆಟ್ಟಿಮುಡಿಯ ಹಲವೆಡೆ ಇಂದು ಕೂಡ ಧಾರಾಕಾರ ಮಳೆಯಿಂದ ಭೂಕುಸಿತಗಳು ಸಂಭವಿಸಿವೆ.

ಕೇರಳದ ಹಲವು ಜಿಲೆಗಳಲ್ಲಿ ವರುಣಾಸುರನ ಆರ್ಭಟ ತೀವ್ರಗೊಂಡಿದೆ. ಇಡುಕ್ಕಿ, ಪಾಲಾಕ್ಕಾಡ್, ತ್ರಿಶೂರ್, ವಯನಾಡ್, ಕಣ್ಣೂರು, ಗುರುವಾಯೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಸಾವು-ನೋವು ಮತ್ತು ಭಾರೀ ಹಾನಿಯ ವರದಿಯಾಗಿದೆ.

ಮುಂದಿನ 24 ತಾಸುಗಳಲ್ಲಿ ಕೇರಳದ ವಿವಿಧೆಡೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

Facebook Comments

Sri Raghav

Admin