ಮೈಸೂರು ಚಿತ್ರನಗರಿ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧ

Social Share

– ಶಿವಣ್ಣ
ಬೆಂಗಳೂರು, ಅ. 14- ಬಹು ನಿರೀಕ್ಷಿತ ಮೈಸೂರು ಚಿತ್ರ ನಗರಿ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದರು.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಚಿತ್ರ ನಗರಿ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಚಿತ್ರ ನಗರಿ ನಿರ್ಮಾಣ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದರು.ಕಂದಾಯ ಇಲಾಖೆಯ ಸಮನ್ವಯ ದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಚಿತ್ರನಗರಿಗೆ ಅಗತ್ಯವಿರುವ ಭೂಮಿಯನ್ನು ಅತಿ ಶೀಘ್ರದಲ್ಲೇ ಪಡೆಯಲಾಗುತ್ತದೆ. ಶೀಘ್ರವೇ ಈ ಚಿತ್ರನಗರಿ ಯೋಜನೆ ಕಾರ್ಯಗತವಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಜ.26ರಂದು ಜರುಗಿದ ಗಣರಾಜ್ಯೋತ್ಸವ ಪರೇಡ್ನಲ್ಲಿ ನಮ್ಮ ಇಲಾಖೆಯ ಕರ್ನಾಟಕ:
ಪಾರಂಪರಿಕ ಕರಕುಶಲ ಕಲೆಗಳ ತೊಟ್ಟಿಲು ಸ್ತಬ್ಧಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ದೊರೆತಿದೆ. ಜತೆಗೆ 68ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಮ್ಮ ಇಲಾಖೆ ನಿರ್ಮಾಣದ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದನವನೀತ ಪಂಡಿತ್ ಡಾ. ವೆಂಕಟೇಶ್ ಕುಮಾರ್ ಅವರ ಕುರಿತ ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ.

ಇವೆರಡು ಮರೆಯಾಗದ ಮೈಲುಗಲ್ಲುಗಳು ಎಂದು ಹೇಳಿದರು. ಇದಕ್ಕೆ ಮುಖ್ಯಮಂತ್ರಿ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು ಎಂದು ಅವರು ಹೇಳಿದರು. ಕಲೆ, ಸಂಸ್ಕೃತಿ ಬಿಂಬಿಸುವ ಸದಭಿರುಚಿಯ ಚಿತ್ರಗಳಿಗೆ ವಿಶೇಷ ಪ್ರೋತ್ಸಾಹ ಕೊಡುವ ಉದ್ದೇಶ ಮುಖ್ಯಮಂತ್ರಿ ಅವರಿಗಿದೆ. 125 ರಿಂದ 200 ಚಲನಚಿತ್ರಗಳಿಗೆ ಸಹಾಯಧನ ನೀಡುವ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಸದಭಿರುಚಿಯ ಚಿತ್ರ ನಿರ್ಮಾಣ ಮುಂದುವರೆಸುವ ಚಿಂತನೆ ಇಲಾಖೆಗಿದೆ ಎಂದು ಅವರು ತಿಳಿಸಿದರು.

ಜಾಹೀರಾತು ನೀತಿ ಪರಿಷ್ಕರಣೆ ಮಾಡಲು ಕರಡನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಇಲಾಖೆಯಿಂದ ಕಳುಹಿಸಲಾಗಿದೆ. ಸರ್ಕಾರದಿಂದ ಶೀಘ್ರದಲ್ಲೇ ಅಂತಿಮ ನೀತಿ ಪ್ರಕಟವಾಗುವ ನಿರೀಕ್ಷೆ ಇದೆ. ಅತ್ಯಂತ ಅನುಭವಿ ಮುಖ್ಯಮಂತ್ರಿಗಳ ಜತೆ ವಾರ್ತಾ ಇಲಾಖೆ ಆಯುಕ್ತರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸುದೈವ.

ಇದರಿಂದ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ನಾಯಕರ ದೃಷ್ಟಿಕೋನದ ಅರಿವಾಗುತ್ತದೆ. ಮುಖ್ಯಮಂತ್ರಿ ಮತ್ತು ಪ್ರಧಾನ ಕಾರ್ಯದರ್ಶಿ ಅವರ ನೇರ ಮಾರ್ಗದರ್ಶನವಿರುತ್ತದೆ. ಬೇಗ ನಿರ್ಧಾರಗಳಾಗಿ, ಅದರ ಪ್ರಯೋಜನ ಜನರಿಗೆ ದೊರೆಯುತ್ತದೆ ಎಂದು ಹರ್ಷದಿಂದ ಹೇಳಿದರು.

ಇಲಾಖೆಯು ಸರ್ಕಾರ, ಮಾಧ್ಯಮದವರು ಹಾಗೂ ಜನಸಾಮಾನ್ಯರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ, ಪಿಂಚಣಿ ಸೇರಿದಂತೆ ಪತ್ರಕರ್ತರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ 28 ಕೋಟಿ ರೂ. ನಷ್ಟದಲ್ಲಿದ್ದ ಈ ನಿಗಮವನ್ನು ಎರಡು ವರ್ಷದಲ್ಲಿ ಎಲ್ಲರ ಸಹಕಾರದಿಂದ 5 ಕೋಟಿ ರೂ. ನಿವ್ವಳ ಲಾಭ ತಂದು ಕೊಟ್ಟಿದ್ದು, ನನ್ನ ವೃತ್ತಿ ಜೀವನದಲ್ಲಿ ಅತೀವ ಸಂತಸದ ವಿಚಾರ ಎಂದರು.
ಕೆಎಸ್ಆರ್ಟಿಸಿ ನಿರ್ದೇಶಕರಾಗಿ ಸಿಬ್ಬಂದಿಯ ರಜೆ ಮತ್ತು ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಿದ ತೃಪ್ತಿ ಇದೆ.

ತುಮಕೂರು ಎಸ್ಪಿಯಾಗಿ, ಸೂಕ್ಷ್ಮ ನಗರವಾದ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ, ಆರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಣೆಯ ಜತೆಗೆ ಎರಡು ಬಾರಿ ವಾರ್ತಾ ಇಲಾಖೆಯ ಆಯುಕ್ತರನ್ನಾಗಿ ಸರ್ಕಾರ ಮಾಡಿದ್ದು, ಪತ್ರಕರ್ತರೊಂದಿಗೆ ಸ್ನೇಹಮಯ ಒಡನಾಟಕ್ಕೆ ಅವಕಾಶವಾಯಿತು ಎಂದು ಅವರು ಹೇಳಿದರು.

ಈ ಇಲಾಖೆಯು ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಣೆ ಮಾಡುತ್ತದೆ. ಸರ್ಕಾರದ ಎಲ್ಲ ಇಲಾಖೆಯ ಯೋಜನೆ, ಕಾರ್ಯಕ್ರಮಗಳ ಮಾಹಿತಿಯನ್ನು ಜಾಹೀರಾತು, ಹೆದ್ದಾರಿ ಫಲಕ, ಸಾಮಾಜಿಕ ಮಾಧ್ಯಮ, ಮುದ್ರಣ, ವಿದ್ಯುನ್ಮಾನ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದೆ. ಜತೆಗೆ ನಾಡಿನ ಹಿರಿಮೆ, ಗರಿಮೆ ಸಾರುವ ಕಲೆ, ಸಂಸ್ಕøತಿಗೆ ಇಂಬು ಕೊಡುವ ಕಾರ್ಯಭಾರವನ್ನು ವಾರ್ತಾ ಇಲಾಖೆಯು ಮಾಡುತ್ತಿದೆ ಎಂದು ಹರ್ಷ ಹೇಳಿದರು.

Articles You Might Like

Share This Article