ಜೂನ್ 21 ವಿಶ್ವ ಯೋಗ ದಿನ ಆ ದಿಸೆಯಲ್ಲಿ ಯೋಗದ ಕುರಿತು ಕೆಲವೊಂದಿಷ್ಟು ವಿಷಯಗಳ ಚಿಂತನ, ಮಂಥನ ಹಾಗೂ ಅನುಷ್ಠಾನಗಳಿಂದ ನಮ್ಮ ಜೀವನ ಪಥವನ್ನು ಒಂದೊಳ್ಳೆ ದಿಕ್ಕಿನೆಡೆಗೆ ಚಲಿಸುವಂತೆ ಮಾಡುವ ಒಂದು ಚಿಕ್ಕ ಪ್ರಯತ್ನ .ಯೋಗ ಎಂದರೆ ಕರ್ಮಸು ಕೌಶಲಂ ನಿಷ್ಕಾಮ ಕರ್ಮ ಮಾಡುವ ಕೌಶಲವೇ ಯೋಗ.. ಎಂದು ಭಗವದ್ಗೀತೆ ಹೇಳುತ್ತದೆ .ಯೋಗ ಎಂಬ ಪದವು ಯುಜ್ ಎಂಬ ಸಂಸ್ಕೃತ ಧಾತುವಿನಿಂದ ಬಂದಿದೆ.
ಯೋಗ ಎಂದರೇ, ಯುಜ್ಯತೇ ಆನೇನ ಇತಿಃ ಯೋಗಃ, ಅಂದರೆ ಹಲವೆಡೆ ಹರಿದಾಡುವ ಮನಸ್ಸನ್ನು /ಚಿತ್ತವನ್ನು ಒಂದೆಡೆಗೆ ಕೇಂದ್ರೀಕರಿಸುವ ಒಂದು ಸಾಧನವಾಗಿದೆ . ಯೋಗಸೂತ್ರವನ್ನು ರಚಿಸಿದ ಪತಂಜಲಿ ಮಹಾ ಮುನಿಗಳು ಹೇಳಿರುವಂತೆ ಯೋಗವೆಂದರೆ ಯಾವುದನ್ನು ಜಿಜ್ಞಾಸೆ, ತರ್ಕಗಳಿಲ್ಲದೆ ,ಅವುಗಳಿಗೆ ಒಳಪಡದಂತೆ ಅನುಷ್ಠಾನ ಮಾಡುವ ಪ್ರಕ್ರಿಯೆಯಾಗಿದೆ, ಎಂದು ತಿಳಿಸಿದ್ದಾರೆ.ಯೋಗದ ಜನ್ಮಸ್ಥಳ ನಮ್ಮ ಭಾರತ. ಯೋಗಿಗಳ ಪ್ರಕಾರ ಯೋಗವು ದೇಹ ಮತ್ತು ಮತ್ತು ಮನಸ್ಸಿನ ಅತ್ಯಂತ ಅತಿಂದ್ರಿಯ ಶಕ್ತಿ ಎಂದು ಹೇಳಲಾಗಿದೆ ಸಾಮಾನ್ಯ
ವ್ಯಕ್ತಿ ಯೊಬ್ಬನೊಳಗಿರುವ ಅಂತಃ ಶಕ್ತಿಯನ್ನು ಕ್ರೂಡೀಕರಿಸಿ ,ಅವನ ದೇಹ ಮತ್ತು ಮನಸ್ಸನ್ನು ಸಂಪೂರ್ಣವಾಗಿ ಉನ್ನತಿ ಎಡೆಗೆ ಸಾಗಿಸುವ ಪಥವೇ ಯೋಗ ಪಥ. ಇದನ್ನು ಸಮಾಧಿ ,ಉಪಾಯ ಸಾಧನ ,ಎಂಬ ಅರ್ಥದಲ್ಲಿಯೂ ಬಳಸಲಾಗುವುದು .ಅಂದರೆ ದೇಹದ ಜೊತೆ ಮನಸ್ಸು ಬುದ್ಧಿ, ಭಾವನೆ ,ಆತ್ಮ ಹಾಗೂ ಅಹಂಕಾರಗಳನ್ನು ಒಂದುಗೂಡಿಸುವುದು ಅಥವಾ ಕೂಡಿಸುವುದು ಎಂಬರ್ಥವಿದೆ.
ಯೋಗದಲ್ಲಿ ಮುಖ್ಯವಾಗಿ 8 ಅಂಗಗಳಿವೆ ==== ಯಮ, ನಿಯಮ ,ಆಸನ ,ಪ್ರಾಣಾಯಾಮ, ಪ್ರತ್ಯಾಹಾರ ,ಧಾರಣ ಮತ್ತು ಸಮಾಧಿ . ಪ್ರಾಣಾಯಾಮವು ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವ ಒಂದು ಉತ್ತಮ ಕಲೆಯಾಗಿದೆ. ಚಂಚಲವಾದ ಮನಸ್ಸಿಗೆ ಕಡಿವಾಣ ಹಾಕಿ ಏಕಾಗ್ರತೆಯನ್ನು ಸಾಧಿಸುವುದು. ನಿರಂತರವಾಗಿ ನಿಯಮಿತವಾಗಿ ಪ್ರಾಣಾಯಾಮ ಮಾಡುವುದರಿಂದ ನಮ್ಮ ದೇಹದ ಜೀವಕೋಶಗಳಿಗೆ ಆಮ್ಲಜನಕದ ಸರಾಗ ಪೂರೈಕೆಯಾಗಿ ನಮ್ಮ ಆರೋಗ್ಯ ಸದಾಕಾಲ ಉತ್ತಮವಾಗಿರುತ್ತದೆ.
ಆಸನವೆಂದರೆ ಸ್ಥಿರವಾದ ಆರಾಮದಾಯಕವಾದ ಭಂಗಿಯಾಗಿದೆ. ಆರಾಮ ಸ್ಥಿತಿಯಲ್ಲಿ/ ಭಂಗಿಯಲ್ಲಿ ಕುಳಿತುಕೊಂಡು ಅಂಗಾಂಗಗಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ನೀಡಿ ಸದೃಢ ದೇಹದಲ್ಲಿ ಏಕಾಗ್ರತೆಯನ್ನು ಕೇಂದ್ರೀಕರಿಸಿ ನಮ್ಮ ಮನಸ್ಸನ್ನು ದೇಹವನ್ನು ಸಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಪ್ರೇರೇಪಿಸುವುದು ಆಸನವಾಗಿದೆ. ಇವುಗಳು ಕೊಂಚ ಭಿನ್ನವಾದ ಆದರೆ ಅಷ್ಟೇ ಪರಿಣಾಮಕಾರಿಯಾದ ವಿಧಾನಗಳು ಕ್ರಿಯಾಶೀಲವಾದ ಬೇರೆ ಬೇರೆ ರೀತಿಯ ಶಾರೀರಿಕ ಕೆಲಸಗಳಿಂದ ಸ್ನಾಯುಗಳು ಬಲಗೊಂಡು ಇಡೀ ನಮ್ಮ ದೇಹ ವ್ಯವಸ್ಥೆಯಲ್ಲಿನ ನರಗಳಿಗೆ ಚಿಕಿತ್ಸೆ ನೀಡಿ ಪ್ರತಿರೋಧ ಶಕ್ತಿಯನ್ನು ಇಮ್ಮಡಿಗೊಳಿಸುವ ಒಂದು ರೀತಿಯ ಚಿಕಿತ್ಸಕ ವಿಧಾನ .ಹೃದಯ ರೋಗ ,ಮಧುಮೇಹ ಮುಂತಾದ ಮಾರಕ ರೋಗಗಳಿದ್ದಾಗ್ಯೂ ಕೂಡ ಶರೀರವನ್ನು ಸುಸ್ಥಿತಿಯಲ್ಲಿಡಲು ಯೋಗವು ಅತ್ಯಂತ ಪರಿಣಾಮಕಾರಿಯಾದ ಸಾಧನವಾಗಿದೆ.
ಅಷ್ಟಾಂಗ ಯೋಗಗಳೆಂದರೆ,,,
ಯಮ _ ಯಮಗಳೆಂದರೆ ನೈತಿಕ ಜೀವನ ನಡೆಸಲು ನಾವು ಅನುಸರಿಸಬೇಕಾದ ನಿರ್ಬಂಧಗಳಾಗಿವೆ. ಅದರಲ್ಲಿ ಐದು ಯಮಗಳಿವೆ. ಮೊದಲನೆಯದು ಅಹಿಂಸ ಯಾವುದೇ ಜೀವಿಗಳಿಗೂ ಹಾನಿ ಮಾಡದೆ ಜೀವಿಸುವ ವಿಧಾನ
ಸತ್ಯ_ ಕೆಲಸ ಮತ್ತು ಮಾತುಗಳಲ್ಲಿ ನಮ್ಮ ಸತ್ಯದ ತಪೋನಿಷ್ಠೆ ಮೆರೆಯುವುದಾಗಿದೆ. ಆಸ್ತೇಯ ಮನತುಂಬಿ ನೀಡದ ಯಾವುದನ್ನು ಕೂಡ( ಸಮಯವನ್ನು ಸೇರಿದಂತೆ)ಯಾವುದನ್ನು ಸ್ವೀಕರಿಸದಿರುವುದು ಬ್ರಹ್ಮಚರ್ಯ ಪರಿಶುದ್ಧ ಆತ್ಮ ಹೊಂದಿ ಪ್ರಲೋಭನಗಳಿಂದ ಪ್ರಭಾವಿತರಾಗದೆ ಸಂಯಮ ಹೊಂದುವುದಾಗಿದೆ
ಪರಿಗ್ರಹ_ ಅವಶ್ಯಕತೆ ಇಲ್ಲದಿರುವುದನ್ನೆಲ್ಲಾ ಬಿಟ್ಟು ಜೀವಿಸುವ ಪರಿಯಾಗಿದೆ
2) ನಿಯಮ
ಸೌಚಾಃ ಅಂತರಂಗ ಮತ್ತು ಬಹಿರಂಗ ಎರಡು ಬಗೆಯ ಶುಚಿಗಳಾಗಿವೆ (ಪ್ಯೂರಿಟಿ ) ಶುದ್ಧತೆಗೆ ಸಂಬಂಧಿಸಿದ ತೃಪ್ತಿ ಹೊಂದಿರುವಂತಹ ಮನೋಭಾವನೆ .
ತಪಸ್ಸು ಸಹಿಷ್ಣತೆ ಅಥವಾ ಸ್ವಯಂಶಿಸ್ತು
ಸ್ವಾಧ್ಯಾಃ ಆತ್ಮಾವಲೋಕನದೊಳಗೆ ಅಧ್ಯಯನಶೀಲರಾಗಿ ದೈವಿಕತೆಯನ್ನು ಮೈಗೂಡಿಸಿಕೊಳ್ಳುವ ಒಂದು ಕಲೆಯಾಗಿದೆ.
ಈಶ್ವರ ಪ್ರಣೀಧಾನ
ದೇವನಲ್ಲಿ ಶರಣಾಗತಿ ಹೊಂದಿ ಸಮರ್ಪಣಾ ಮನೋಭಾವದಿಂದ ಎಲ್ಲಾ ಕಾರ್ಯಗಳನ್ನು ಮಾಡುವಂತಹ ಮನೋಭೂಮಿಕೆಯಾಗಿದೆ.
3) ಪ್ರತ್ಯಾಹಾರ_ ನಮ್ಮ ಇಂದ್ರಿಯಗಳನ್ನು ಪರಿಸರದ ಸಂಪರ್ಕದಿಂದ ಬೇರ್ಪಡಿಸುವುದು ಇದರಿಂದ ಇಂದ್ರಿಯಗಳನ್ನು ಸುಲಭವಾಗಿ ನಿರ್ವಹಣೆಯನ್ನು ಮಾಡಬಹುದಾಗಿದೆ .
4) ಧಾರಣ _ ಯಾವುದೇ ಒಂದು ನಿರ್ದಿಷ್ಟ ವಿಷಯದಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಮತ್ತು ವಿಷಯಗಳ ಧಾರಣ ಮಾಡಿ ಸ್ಥಿರತೆಯನ್ನು ಪಡೆಯುವುದು ಮನಸ್ಸಿನ ನಿಶ್ಚಲತೆ ಏಕಾಗ್ರತೆಯಲ್ಲಿ
ಲೀನವಾಗುವುದು.
5) ಸಮಾಧಿ __ ಕೊನೆಯ ಘಟ್ಟವಾಗಿರುವ ಸಮಾಧಿಯು ಮನೋ ನಿಯಂತ್ರಣದೊಳಗೆ ಚಿತ್ತ ಚಾಂಚಲ್ಯವಿಲ್ಲದೆ ಪ್ರೀತಿ, ಕರುಣೆ ಹೊಂದುವಂತಹ ಸಮಾಧಿ ಸ್ಥಿತಿಯಾಗಿದೆ .
ಯೋಗದ ಉಪಯೋಗಗಳು
ಇಂದಿನ ಯಾಂತ್ರಿಕ ಯುಗದಲ್ಲಿ ಬದಲಾದ ಬದುಕಿನ ಶೈಲಿಯಲ್ಲಿ ಮಾನವ ಒಂದು ಯಂತ್ರವೇ ಆಗಿ ಹೋಗಿದ್ದಾನೆ. ನಿರಂತರ ದುಡಿಮೆ ಮನೋಲ್ಲಾಸ ರಹಿತ ಬದುಕಿನ ರೀತಿ ನೀತಿ ದೇಹವನ್ನು ದಂಡಿಸದೆ ಇರುವುದು ಮುಂತಾದ ಕಾರಣಗಳಿಂದಾಗಿ ಇಂದು ನಮಗೆ ಜನನಧಾರಭ್ಯವಾಗಿ ರೋಗಗಳು ಬಳುವಳಿಯಾಗಿ ಬರುತ್ತಿವೆ. ಸರಿಯಾದ ಆಹಾರ ಕ್ರಮವನ್ನು ಪಾಲಿಸದೇ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ನಿಯಮಿತವಾಗಿ ಯೋಗ ಧ್ಯಾನ ಪ್ರಾಣಾಯಾಮಗಳನ್ನು ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಅಧಿಕ ರಕ್ತದೊತ್ತಡವನ್ನು ನಿವಾರಣೆ ಮಾಡಿ, ಕೊಬ್ಬಿನ ಶೇಖರಣೆ ಕಡಿಮೆ ಮಾಡಿ, ಆರೋಗ್ಯದ ಸುಸ್ಥಿತಿಯನ್ನು ಕಾಪಾಡಿ ,ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳಿಗೆ ನಮ್ಮನ್ನು ಒಡ್ಡುತ್ತದೆ, ತನ್ಮೂಕೇನ ಸದೃಢ ದೇಹದಲ್ಲಿ ಸದೃಢ ಮನಸ್ಸಿನ ಸ್ಥಾಪನೆಗೆ ಕಾರಣವಾಗುತ್ತದೆ.
ಹಿನ್ನೆಲೆ
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014ರ ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯು ತನ್ನ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಯಿತು. ಸದಸ್ಯ ರಾಷ್ಟ್ರಗಳ ಬೆಂಬಲ ದೊರೆತು ಸುಮಾರು 193 ರಾಷ್ಟ್ರಗಳ ಪೈಕಿ 177 ದೇಶಗಳು ಇದಕ್ಕೆ ಅನುಮೋದನೆಯನ್ನು ನೀಡಿದವು. 2015 ಜೂನ್ 21ರಂದು ಮೊದಲ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಪ್ರಧಾನಿ ನರೇಂದ್ರ ಮೋದಿ ಹಾಗೂ 84 ಇತರ ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 21 ಯೋಗ ಆಸನಗಳನ್ನು ಅಭ್ಯಾಸ ಮಾಡಿ ಮಾದರಿ ಮೆರೆದರು.
ಜೂನ್ 21 ನೇಯ ತಾರೀಕು , ವರ್ಷದಲ್ಲಿ ಅತ್ಯಂತ ಅಧಿಕ ಹಗಲನ್ನು ಹೊಂದಿರುವ ಕಾರಣ ಯೋಗದ ದೃಷ್ಟಿಕೋನದಲ್ಲಿ ಈ ದಿನವೂ ಹೆಚ್ಚು ಮಹತ್ವವನ್ನು ಪಡೆದಿರುತ್ತದೆ. ಮನುಷ್ಯ ಮತ್ತು ಪ್ರಕೃತಿಯೊಂದಿಗೆ ಬಾಂಧವ್ಯವೇ ಯೋಗವಾಗಿರುವುದರಿಂದ ಅಬಾಲ ವೃದ್ಧರಾಗಿ ಯೋಗವನ್ನು ಅನುಸರಿಸೋಣ…ಅದರ ಮುಖೇನ ನಾವುಗಳು ರೋಗ ಮುಕ್ತರಾಗೋಣ.

ಬಿ ಎಂ ಪ್ರಮೀಳ
ವಿಜ್ಞಾನ ಶಿಕ್ಷಕರು , ಚಿಕ್ಕಬಳ್ಳಾಪುರ
BMPramila, #InternationalDayYoga, #June21,