ಬೆಂಗಳೂರು, ಸೆ.23- ಬಿಎಂಎಸ್ ಟ್ರಸ್ಟ್‍ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಜೆಡಿಎಸ್ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪರಿಣಾಮ ಇಂದು ಯಾವುದೇ ಕಾರ್ಯ-ಕಲಾಪ ನಡೆಯದೆ ಮಳೆಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಒಂದು ಕಡೆ ಜೆಡಿಎಸ್ ವಿಧಾನಸಭೆಯ ಕಲಾಪಕ್ಕೆ ಅಡ್ಡಿಪಡಿಸಿ ಸದನದ ಬಾವಿಗಿಳಿದರೆ ಮತ್ತೊಂದು ಕಡೆ ಪ್ರತಿಪಕ್ಷ ಕಾಂಗ್ರೆಸ್ 40% ಕಮಿಷನ್ ಭ್ರಷ್ಟಾಚಾರವನ್ನು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿತು. ಈ ನಡುವೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ, ಆರೋಪ, ಪ್ರತ್ಯಾರೋಪ ನಡೆಯಿತು. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ಅನಿರ್ದಿಷ್ಟಾವಗೆ ಮುಂದೂಡಿದರು.
ಬೆಳಗ್ಗೆ 10.30ಕ್ಕೆ ಸದನ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‍ನ ಎಲ್ಲ ಸದಸ್ಯರು ಸಚಿವ ಅಶ್ವತ್ಥ್ ನಾರಾಯಣ ಅವರ ಭಾವಚಿತ್ರವಿರುವ ಭಿತ್ತಿಪತ್ರ ಹಿಡಿದು ರಾಜೀನಾಮೆಗೆ ಒತ್ತಾಯಿಸಿದರು.
ಬಿಎಂಎಸ್ ಟ್ರಸ್ಟ್‍ನಲ್ಲಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಶ್ವತ್ಥ್ ನಾರಾಯಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದನ್ನು ಕೇಂದ್ರ ಇಲ್ಲವೆ ರಾಜ್ಯ ಸರ್ಕಾರ ನೇತೃತ್ವದ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಸದನದ ಬಾವಿಗಿಳಿದು ಒತ್ತಾಯಿಸಿದರು.
ಈ ವೇಳೆ ಸಭಾಧ್ಯಕ್ಷ ಕಾಗೇರಿ ಅವರು ಈಗಾಗಲೇ ಸರ್ಕಾರ ಈ ಬಗ್ಗೆ ನಿನ್ನೆಯೇ ಸ್ಪಷ್ಟನೆ ಕೊಟ್ಟಿದೆ. ತನಿಖೆಗೆ ವಹಿಸುವುದಿಲ್ಲ ಎಂದು ಹೇಳಿರುವಾಗ ಪುನಃ ಧರಣಿ ನಡೆಸುವುದರಲ್ಲಿ ಅರ್ಥವಿಲ್ಲ. ಪ್ರಶ್ನೋತ್ತರ ಅವಧಿಗೆ ಸಹಕರಿಸಬೇಕು. ನಿಮ್ಮ ಧರಣಿಯನ್ನು ಕೈಬಿಡಿ ಎಂದು ಮನವಿ ಮಾಡಿದರು.
ಆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ನಾವು ಸದನದ ಸಮಯವನ್ನು ಎಲ್ಲೂ ವ್ಯರ್ಥ ಮಾಡಿಲ್ಲ, ಸಹಕಾರ ಕೊಟ್ಟಿದ್ದೇವೆ. ನಾವು ಪ್ರಸ್ತಾಪಿಸುವ ಪ್ರಕರಣವನ್ನು ತನಿಖೆಗೆ ವಹಿಸಿದರೆ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಜೆಡಿಎಸ್ ಸದಸ್ಯರು ತನಿಖೆಗೆ ವಹಿಸಲು ಒತ್ತಾಯಿಸಿದ್ದಾರೆ.
ಸರ್ಕಾರ ತನಿಖೆ ಅಗತ್ಯವಿಲ್ಲ ಎಂದು ಹೇಳುತ್ತಿದೆ. ಇಂದು ಕೊನೆ ದಿನದ ಅಧಿವೇಶನವಾಗಿರುವುದರಿಂದ ಗುತ್ತಿಗೆದಾರರ ಸಂಘ ಆರೋಪಿಸಿರುವ 40% ಕಮಿಷನ್ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಬೇಕು. ಈ ಕುರಿತು ನಾವು ಸೂಚನೆ ಪತ್ರ ನೀಡಿದ್ದೇವೆ. ಸರ್ಕಾರ ಸೋಮವಾರದವರೆಗೂ ಅಧಿವೇಶನ ನಡೆಸಲಿ ಎಂದು ಒತ್ತಾಯಿಸಿದರು.
ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಈಗಾಗಲೇ ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಸದಸ್ಯರು ಇದೇ ವಿಷಯ ಮುಂದಿಟ್ಟುಕೊಂಡು ಧರಣಿ ನಡೆಸುವುದರಲ್ಲಿ ಅರ್ಥವಿಲ್ಲ. ಎಲ್ಲ ಪಕ್ಷಗಳ ಪ್ರಮುಖರ ಜತೆ ಚರ್ಚಿಸಲು ಕೆಲಕಾಲ ಕಲಾಪ ಮುಂದೂಡಿ ಎಂದು ಹೇಳಿದರು. ಆಗ ಸಭಾಧ್ಯಕ್ಷರು 10 ನಿಮಿಷ ಸದನದ ಕಾರ್ಯ-ಕಲಾಪಗಳನ್ನು ಮುಂದೂಡಿದರು.
ಪುನಃ ಸದನ ಸೇರುತ್ತಿದ್ದಂತೆ ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿ ಸದನದ ಬಾವಿಗಿಳಿದು ಸಚಿವ ಅಶ್ವತ್ಥ್ ನಾರಾಯಣ ಅವರ ವಿರುದ್ಧ ಕ್ಕಾರದ ಘೋಷಣೆಗಳನ್ನು ಕೂಗಿ ರಾಜೀನಾಮೆಗೆ ಒತ್ತಾಯಿಸಿದರು.
ಸಭಾಧ್ಯಕ್ಷ ಕಾಗೇರಿ ಅವರು ನಾವು ಪ್ರಶ್ನೋತ್ತರ ಅವಧಿ ಪ್ರಾರಂಭಿಸಬೇಕು. ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ. ಪುನಃ ಧರಣಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ. ದಯವಿಟ್ಟು ಸದಸ್ಯರು ತಮ್ಮ ತಮ್ಮ ಸ್ಥಾನಗಳಿಗೆ ಮರಳಿ ಎಂದು ಮನವಿ ಮಾಡಿಕೊಂಡರು.
ಇದುವರೆಗೂ ಕಲಾಪ ಅರ್ಥಪೂರ್ಣವಾಗಿ ನಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೀರಿ. ನಾವು ಅಭಿನಂದನೆ ಸಲ್ಲಿಸಬೇಕು. ಮೊದಲು ಧರಣಿ ಕೈಬಿಡಿ ಎಂದು ಕಿವಿಮಾತು ಹೇಳಿದರು.
ಆಗ ಕುಮಾರಸ್ವಾಮಿ ಅವರು ಇದು 10 ಸಾವಿರ ಕೋಟಿಗಿಂತಲೂ ಅಧಿಕ ವಹಿವಾಟಿನ ಟ್ರಸ್ಟ್. ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ತಮಗೆ ಬೇಕಾದ ರೀತಿ ತಿದ್ದುಪಡಿ ಮಾಡಿಕೊಳ್ಳಲಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಿಬಿಐ ಇಲ್ಲವೆ ಸಿಐಡಿ ಸೇರಿದಂತೆ ಯಾವುದಾದರೂ ತನಿಖಾ ಸಂಸ್ಥೆಗೆ ವಹಿಸಬೇಕು. ಕಲಾಪ ನಡೆಯಲು ಸಹಕರಿಸುವುದಾಗಿ ಹೇಳಿದರು.
ಈ ಹಂತದಲ್ಲಿ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್‍ನವರು ಒಂದು ಕಡೆ ಧರಣಿ ನಡೆಸುತ್ತಿದ್ದಾರೆ, ಸರ್ಕಾರ ತನಿಖೆಯ ಅಗತ್ಯವಿಲ್ಲ ಎಂದು ಹೇಳುತ್ತಿದೆ. ಇದು ಕೊನೆಯ ದಿನದ ಅವೇಶನ. ಗುತ್ತಿಗೆದಾರರ ಸಂಘ 40% ಕಮಿಷನ್ ಭ್ರಷ್ಟಾಚಾರ ಮಾಡಿದ್ದಾರೆ. ಇದು ಚರ್ಚೆಯಾಗಬೇಕು. ಸಮಯ ವ್ಯರ್ಥವಾಗುತ್ತಿದೆ. ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.
ಈ ಹಂತದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಅವರು ಪುನಃ ಸಮರ್ಥನೆ ಮಾಡಿಕೊಂಡು ಟ್ರಸ್ಟ್‍ನಲ್ಲಿ ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶವಿಲ್ಲ. ನಾವು ಕೆಳಹಂತದ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಮುಂದಿಟ್ಟುಕೊಂಡು ಕೆಲವು ನಿಯಮಗಳಿಗೆ ತಿದ್ದುಪಡಿ ಮಾಡಿದ್ದೇವೆ. ಇದು ಮುಂದೆಯೂ ಕೂಡ ಸಾರ್ವಜನಿಕ ಟ್ರಸ್ಟ್ ಆಗಿಯೇ ಉಳಿಯಲಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಎಲ್ಲಿಯೂ ಇರುವುದಿಲ್ಲ. ಕುಮಾರಸ್ವಾಮಿ ಅವರು ಮಾಡಿರುವ ಆರೋಪ ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದೆ. ಇದರಲ್ಲಿ ಏನೂ ಅವ್ಯವಹಾರ ನಡೆಯದಿರುವಾಗ ತನಿಖೆಯ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಆಗ ಮತ್ತೆ ಸದನದಲ್ಲಿ ಗದ್ದಲ-ಕೋಲಾಹಲ ಉಂಟಾಯಿತು. ಅಶ್ವತ್ಥ್ ನಾರಾಯಣ ಅವರು ಮಾತನಾಡುತ್ತಿದ್ದಂತೆ ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಗದ್ದಲದ ನಡುವೆಯೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 40% ಕಮಿಷನ್ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸರ್ಕಾರ ಈ ಕುತಂತ್ರ ಮಾಡುತ್ತಿದೆ. ಚರ್ಚೆ ನಡೆದರೆ ಎಲ್ಲಿ ತಮ್ಮ ಅಕ್ರಮಗಳು ಹೊರಬರಲಿವೆಯೋ ಎಂಬ ಭೀತಿಯಿಂದ ಅವಕಾಶ ನೀಡದೆ ಸಮಯ ವ್ಯರ್ಥ ಮಾಡುತ್ತಿದೆ. ಇದು ಅತ್ಯಂತ ಭ್ರಷ್ಟ ಸರ್ಕಾರ, ದಮ್ಮು-ತಾಕತ್ತು ಇದ್ದರೆ ನಿಮ್ಮ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರ ಆಕ್ಷೇಪಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ಸರ್ಕಾರ ಯಾವುದನ್ನೂ ಮುಚ್ಚಿಟ್ಟಿಲ್ಲ. ಎಲ್ಲ ಅಕ್ರಮಗಳೂ ತನಿಖೆಯಾಗಲಿ. ತಮ್ಮ ಸರ್ಕಾರದ ಅವಯಲ್ಲಿ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ ಎಂದು ಹೇಳಿರುವ ಸಿದ್ದರಾಮಯ್ಯ ಅವರು ರೀ-ಡೂ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರೆ ನಾವು ಕೂಡ ಚರ್ಚೆಗೆ ಸಿದ್ಧರಿದ್ದೇವೆ ಎಂದು ಹೇಳಿದರು.
ಈ ವೇಳೆ ಸದನದಲ್ಲಿ ಮತ್ತೆ ಗದ್ದಲ-ಪ್ರತ್ಯಾರೋಪ ಉಂಟಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.
ಧರಣಿ ಕೈಬಿಡಬೇಕೆಂದು ಸಭಾಧ್ಯಕ್ಷರು ಮಾಡಿಕೊಂಡ ಮನವಿಗೆ ಯಾರೂ ಸ್ಪಂದಿಸದಿದ್ದರಿಂದ ಸದನವನ್ನು ಅನಿರ್ದಿಷ್ಟಾವಗೆ ಮುಂದೂಡಲಾಯಿತು.