ಬೆಂಗಳೂರು,ಅ.10- ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ಮುಂದೆ ಚಲಿಸಿದ ಪರಿಣಾಮ ಕೆಳಗೆ ಬಿದ್ದ ಪಿಜಿ ವಿದ್ಯಾರ್ಥಿನಿ ಮೇಲೆ ಬಸ್ ಚಕ್ರ ಹರಿದು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಪ್ರಥಮ ವರ್ಷದ ಗಣಿತ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ, ಕೋಲಾರ ಮೂಲದ ಶಿಲ್ಪಾ ಗಂಭೀರ ಗಾಯಗೊಂಡಿದ್ದು, ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಇಂದು ಬೆಳಗ್ಗೆ 10.30ರ ಸುಮಾರಿನಲ್ಲಿ ಶಿಲ್ಪಾ ಅವರು ಬಿಎಂಟಿಸಿ ಬಸ್‍ನ ಮಧ್ಯದ ಡೋರ್‍ನಲ್ಲಿ ಹತ್ತುತ್ತಿದ್ದಂತೆ ಬಸ್ ಚಲಿಸಿದೆ.
ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಶಿಲ್ಪಾ ಅವರ ಮೇಲೆ ಬಸ್‍ನ ಹಿಂಬದಿ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪ್ರತಿಭಟನೆ: ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಪಿಜಿ ವಿದ್ಯಾರ್ಥಿಗಳು ವಿವಿ ಆವರಣದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ರಸ್ತೆಯಲ್ಲಿ ಬಸ್‍ಗಳ ಸಂಚಾರವನ್ನು ನಿಷೇಧಿಸಬೇಕು ಹಾಗೂ ಅಪಘಾತವೆಸಗಿದ ಬಸ್ ಚಾಲಕನನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಸುದ್ದಿ ತಿಳಿದು ಜ್ಞಾನಭಾರತಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ಬಂದೋಬಸ್ತ್ ಮಾಡಿದ್ದಾರೆ. ಅಪಘಾತದ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.