ಬಿಎಂಟಿಸಿ ಬಸ್‍ಗೆ ಬೆಂಕಿ ಬಿದ್ದರೆ ನಷ್ಟವನ್ನು ಸಿಬ್ಬಂದಿಗಳು ತುಂಬಿಕೊಡಬೇಕಂತೆ..!

Spread the love

ಬೆಂಗಳೂರು,ಮೇ.16- ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರೂ ಅನ್ನೋ ಹಾಗೆ ಬಸ್‍ಗಳಿಗೆ ಬೆಂಕಿ ಬಿದ್ದರೆ ಅದರ ನಷ್ಟವನ್ನು ಬಿಎಂಟಿಸಿ ಸಿಬ್ಬಂದಿಗಳು ತುಂಬಿ ಕೊಡಬೇಕಂತೆ! ಹೌದು ಬಿಎಂಟಿಸಿ ಸಂಸ್ಥೆ ಇಂತಹ ಒಂದು ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರಕ್ಕೆ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಫೆಬ್ರವರಿ 2ರಂದು ಸೌತ್ ಎಂಡ್ ವೃತ್ತದ ಬಳಿ ಬಿಎಂಟಿಸಿ ಬಸ್‍ಗೆ ಬೆಂಕಿ ಬಿದ್ದಿತ್ತು. ಬಸ್‍ಗೆ ಬೆಂಕಿ ಬಿದ್ದ ಪರಿಣಾಮ ಸಂಸ್ಥೆಗೆ 13,61,311 ರೂ.ಗಳ ನಷ್ಟ ಸಂಭವಿಸಿದೆಯಂತೆ. ಈ ನಷ್ಟವನ್ನು ಬಸ್ ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿಗಳಿಂದ ಭರಿಸಿಕೊಳ್ಳಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ.

ತಾಂತ್ರಿಕ ದೋಷದಿಂದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕಿಟಕಿ ಗಾಜು, ಚಾಲಕನ ಆಸನ, ಮಾರ್ಗಫಲಕ, ಬಾಗಿಲು ಹಾಗೂ ಎಂಜಿನ್ ಭಾಗಗಳು ಬೆಂಕಿಗೆ ಆಹುತಿಯಾಗಿದ್ದವು. ಹೀಗಾಗಿ ಸಂಸ್ಥೆಗೆ ಆಗಿರುವ 13 ಲಕ್ಷ ನಷ್ಟವನ್ನು ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿಗಳೇ ತುಂಬಿ ಕೊಡಬೇಕು ಎಂದು ಬಿಎಂಟಿಸಿ ಸಂಸ್ಥೆ ನೋಟೀಸ್ ಜಾರಿ ಮಾಡಿದೆ.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರೂ ಅನ್ನೋ ಹಾಗೇ ಬಸ್‍ಗೆ ಬೆಂಕಿ ಬಿದ್ದರೆ, ನಮಗ್ಯಾಕೆ ದಂಡದ ಹೊರೆ ಎಂದು ಆರೋಪಿಸಿರುವ ಬಿಎಂಟಿಸಿ ಸಿಬ್ಬಂದಿಗಳು ಕೂಡಲೇ ಈ ತೀರ್ಮಾನವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.