ಇರೋ ಬಸ್ಸುಗಳಿಗೆ ಚಾಲಕರಿಲ್ಲ, ಬಿಎಂಟಿಸಿಗೆ ಹೊಸ ಬಸ್ ಖರೀದಿ ಅವಶ್ಯಕತೆ ಏನಿತ್ತು.. ?

Social Share

ಬೆಂಗಳೂರು,ನ.17- ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂ ಬೇಕು ಅಂತರಲ್ಲ ಅನ್ನೋ ಗಾದೆ ಮಾತಿನ ಹಾಗೆ ಈಗಾಗಲೇ ನಷ್ಟದಲ್ಲಿದ್ದು ಮತ್ತೆ ಹೊಸ ಬಸ್‍ಗಳನ್ನು ಖರೀದಿ ಮಾಡಲು ಬಿಎಂಟಿಸಿ ಮುಂದಾಗಿದೆ.ಸದ್ಯ ಬಿಎಂಟಿಸಿಯಲ್ಲಿ 6500 ಬಸ್‍ಗಳು ಸಂಚರಿಸುತ್ತಿವೆ. ಈ ಬಸ್‍ಗಳ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸಲು ಬಿಎಂಟಿಸಿ ಪ್ಲಾನ್ ಹಾಕಿಕೊಂಡಿದೆ.

ಈಗ ಇರುವ 6500 ಬಸ್‍ಗಳಿಗೆ ಚಾಲಕರು ಸಿಗದೆ ಹಲವಾರು ರೂಟ್‍ಗಳನ್ನು ಬಿಎಂಟಿಸಿ ನಿಗಮ ಕ್ಯಾನ್ಸಲ್ ಮಾಡುತ್ತಿದೆ. ಆದರೂ ಹೊಸ ಬಸ್ ಖರೀದಿಗೆ ಉತ್ಸಾಹ ತೋರುತ್ತಿರುವುದು ಯಾಕೆ ಅನ್ನೋದು ಮಾತ್ರ ಯಾರಿಗೂ ಆರ್ಥ ಆಗುತ್ತಿಲ್ಲ.

ಪರಿಸರ ಸ್ನೇಹಿ ಎಲೆಕ್ಟ್ರೀಕ್ ಬಸ್‍ಗಳ ಜೊತೆಗೆ ಡೀಸಲ್ ಬಸ್‍ಗಳನ್ನು ಖರೀದಿಸುವ ಮೂಲಕ ಬೆಂಗಳೂರು ನಗರದ ಬಸ್ ಸಂಚಾರವನ್ನು 10 ಸಾವಿರಕ್ಕೆ ಏರಿಸಲು ತೀರ್ಮಾನಿಸಲಾಗಿದೆ.ಹೀಗಿರುವ ಬಸ್‍ಗಳನ್ನು ನಿಲ್ಲಿಸಲು ಜಾಗದ ಕೊರತೆ ಕಾಡುತ್ತಿದೆ. ಇದರ ಜೊತೆಗೆ ಮತ್ತೆ 3500 ಹೊಸ ಬಸ್‍ಗಳನ್ನು ಖರೀದಿಸಿದರೆ ಆ ಬಸ್‍ಗಳನ್ನು ಎಲ್ಲಿ ನಿಲ್ಲಿಸ್ತಾರೋ ಆ ದೇವರೆ ಬಲ್ಲ.

ತನ್ನ ನೌಕರರಿಗೆ ಸಂಬಳ ನೀಡೋದಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸಂಸ್ಥೆಯವರು ದುಡ್ಡಿಲ್ದೆ ದರ್ಬಾರ್ ಮಾಡೋದಕ್ಕೆ ಮುಂದಾದರೆ ಎಂಬ ಅನುಮಾನ ಎಲ್ಲರನ್ನೂ ಕಾಡತೊಡಗಿದೆ.ಬಸ್‍ಗಳನ್ನು ನಿಲ್ಲಿಸಲು ಜಾಗವಿಲ್ಲದಿದ್ದರೂ ಹೊಸ ಬಸ್ ಖರೀದಿಗೆ ಮುಂದಾಗಿರುವ ಸಂಸ್ಥೆಯವರು ಹೊಸ ಬಸ್‍ಗಳ ನಿಲುಗಡೆಗಾಗಿ 5 ಹೊಸ ಡಿಪೋಗಳ ಸ್ಥಾಪನೆಗೂ ತೀರ್ಮಾನಿಸಿದೆಯಂತೆ.

ಇನ್ನು ಹೊಸದಾಗಿ ಖರೀದಿಸುವ ಎಲೆಕ್ಟ್ರಿಕ್ ಬಸ್‍ಗಳಿಗೆ ಬೇಕಾದ ಚಾರ್ಜಿಂಗ್ ಪಾಯಿಂಟ್ ನಿರ್ಮಾಣಕ್ಕೂ ಸರ್ಕಸ್ ಮಾಡುವಂತಾಗಿದೆ.ಕೆಲ ಬಸ್‍ಗಳಿಗೆ ಚಾಲಕರಿಲ್ಲದೆ ನಿಂತಲ್ಲೇ ನಿಲ್ಲಿಸಲಾಗಿದೆ. ಇದರ ಜೊತೆಗೆ ತಮ್ಮ ಸಿಬ್ಬಂದಿಗಳಿಗೆ ವೇತನ ನೀಡದೆ ಹೆಣಗಾಡುತ್ತಿರುವ ಬಿಎಂಟಿಸಿಯವರು ಇಂತಹ ಸಂಕಷ್ಟದ ಸಮಯದಲ್ಲೂ ಹೊಸ ಬಸ್ ಖರೀದಿಗೆ ಮುಂದಾಗಿರುವುದು ಯಾಕೆ ಅನ್ನೋದೆ ಆರ್ಥವಾಗುತ್ತಿಲ್ಲ.

Articles You Might Like

Share This Article