ಮೈಸೂರು, ಜು.10- ಕೆಆರ್‍ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೊಡಗು ಜಿಲ್ಲೆ ಸೇರಿದಂತೆ ಕಾವೇರಿ ಕಣಿವೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‍ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯ ಭರ್ತಿಯಾಗಲು ಕೇವಲ ಎರಡು ಅಡಿ ಮಾತ್ರ ಬಾಕಿ ಉಳಿದಿದೆ. ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ನಿನ್ನೆಯಿಂದ 13 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರಿಂದ ನದಿ ಪಾತ್ರ ಹಾಗೂ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಯಾವುದೇ ಸಂದರ್ಭದಲ್ಲೂ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ವಿ.ಕರಿಕಾಳನ್ ಸೂಚನೆ ಮೇರೆಗೆ ನಿನ್ನೆಯಿಂದಲೇ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಎಲ್ಲಾ ದೋಣಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿ ಹಾಕಲಾಗಿದ್ದು, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವವರೆಗೂ ದೋಣಿಯಾನ ಆರಂಭಿಸದಂತೆ ಸೂಚನೆ ನೀಡಲಾಗಿದೆ. ಆದರೆ ಪ್ರವಾಸಿಗರು ರಂಗನತಿಟ್ಟು ಉದ್ಯಾನವನಕ್ಕೆ ಭೇಟಿ ನೀಡಬಹುದಾಗಿದೆ.
60 ಸಾವಿರ ಕ್ಯೂಸೆಕ್ಸ್‍ಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಟ್ಟರೆ ಮಾತ್ರ ಪಕ್ಷಿಧಾಮಕ್ಕೂ ಪ್ರವಾಸಿಗರ ಪ್ರವೇಶ ನಿರ್ಬಂಸಲಾಗುತ್ತದೆ.
ರಂಗನತಿಟ್ಟು ಪಕ್ಷಿಧಾಮದ ಬಳಿ ನದಿಯಲ್ಲಿ ನೀರಿನ ಸ್ಥಿತಿಗತಿ ಪರಿಶೀಲಿಸುವಂತೆ ಆರ್‍ಎಫ್‍ಒ ಸಂತೋಷ್ ಹೂಗಾರ್, ಡಿಆರ್‍ಎಫ್‍ಒ ಎಂ.ಪುಟ್ಟಮಾದೇಗೌಡ ಅವರು ಪಕ್ಷಿಧಾಮದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಪ್ರವಾಸಿಗರು ನದಿ ದಡದ ಬಳಿ ಹೋಗದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ. ದಿನದ 24 ಗಂಟೆಯೂ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.