ಟ್ರಯಾಂಗಲ್ ಲವ್ ಸ್ಟೋರಿ, ಪ್ರೀತಿಗಾಗಿ ಶವವಾದ ಯುವಕರು..!
ಮುಜಾಫರ್ನಗರ, ಅ.18- ಪ್ರೀತಿ ಕೈಕೊಟ್ಟಿದ್ದರಿಂದ ವಿಚಲಿತರಾದ ಇಬ್ಬರು ಯುವಕರ ಪೈಕಿ ಒಬ್ಬ ಮತ್ತೊಬ್ಬನನ್ನು ಹತ್ಯೆ ಮಾಡಿ, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಮೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಮುಜಾಫರ್ನಗರ ಜಿಲ್ಲೆಯ ದುಹ್ಲೆರ ಗ್ರಾಮದ ಜಮೀನಿನಲ್ಲಿ ಗುಂಡೇಟಿನಿಂದ ಮೃತಪಟ್ಟ ಇಬ್ಬರು ಯುವಕರ ಶವಗಳು ಅ.13ರಂದು ಪತ್ತೆಯಾಗಿದ್ದವು.
ಪಾರಸ್ (22), ದೀಪಕ್ (23) ಎಂಬಿಬ್ಬರು ಮೃತಪಟ್ಟಿದ್ದರು. ಯುವಕರ ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಹತ್ಯೆ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ತನಿಖೆ ನಡೆಸಿದ ಪೊಲೀಸರು ಸಾವಿನ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ದೀಪಕ್ ಪಾರಸ್ನನ್ನು ಗುಂಡಿಟ್ಟು ಹತ್ಯೆ ಮಾಡಿ, ನಂತರ ತಾನು ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಮುಖ್ಯಾಧಿಕಾರಿ ಅತುಲ್ ಕುಮಾರ್ ತಿಳಿಸಿದ್ದಾರೆ.
ಈ ಘಟನೆಯ ಹಿಂದೆ ಒಬ್ಬ ಮಹಿಳೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ಸ್ಪಷ್ಟತೆ ಬಂದ ಬಳಿಕ ಮಹಿಳೆಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.