Bomb, threat, school, Bengaluru,
ಬೆಂಗಳೂರು,ಜು.18 ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಕಿಡಿಗೇಡಿಗಳು ಆರ್‌ಆರ್‌ನಗರದ ಪ್ರತಿಷ್ಠಿತ ಶಾಲೆಗೆ ಇಮೇಲ್ ಸಂದೇಶ ರವಾನಿಸಿದ್ದರಿಂದ ಬೆಳ್ಳಂಬೆಳಗ್ಗೆಯೇ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಐಡಿಯಲ್ ಹೋಂ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ ಇದೆ.
ಈ ಶಾಲೆಯಲ್ಲಿ ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಎಂದಿನಂತೆ ಶಾಲೆ ಉದ್ಯೋಗಿಯೊಬ್ಬರು ಇಮೇಲ್ ಪರಿಶೀಲಿಸುತ್ತಿದ್ದಾಗ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಗಮನಿಸಿ ತಕ್ಷಣ ಪೊಲೀಸರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ.
ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ , ತಜ್ಞರು ಸ್ಥಳಕ್ಕೆ ದೌಡಾಯಿಸಿ ಶಾಲೆಯಲ್ಲಿದ್ದ ಎಲ್ಲಾ ಮಕ್ಕಳನ್ನೂ ಪಕ್ಕದ ಶಾಲೆಗೆ ಸ್ಥಳಾಂತರಿಸಿ ಪರಿಶೀಲನೆಯಲ್ಲಿ ತೊಡಗಿದರು. ಶಾಲೆಯ ಎಲ್ಲಾ ಕೊಠಿಗಳು, ಆವರಣ, ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದು, ಬಾಂಬ್ ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಸಂದೇಶ ಎಂಬುದು ಗೊತ್ತಾಗಿದೆ.
ಈ ಬಗ್ಗೆ ಆರ್‍ಆರ್‍ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಮೇಲ್ ಸಂದೇಶ ಎಷ್ಟು ಹೊತ್ತಿಗೆ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಹಾಗೂ ಯಾರು, ಯಾವ ಕಾರಣಕ್ಕಾಗಿ ಈ ಸಂದೇಶ ಕಳುಹಿಸಿದರು ಎಂಬಿತ್ಯಾದಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಭಯಪಡುವಂತಿಲ್ಲ:
ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂಬುದು ಸುಳ್ಳು. ಯಾರು ಭಯಪಡುವಂತಿಲ್ಲ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಆದಷ್ಟು ಶೀಘ್ರ ಸಂದೇಶ ಕಳುಹಿಸಿದ ಕಿಡಿಗೇಡಿಗಳನ್ನು ಬಂಸುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾಳೆ ಎಂದಿನಂತೆ ಶಾಲೆ:
ಶಾಲೆಗೆ ಬಾಂಬ್ ಇಡಲಾಗಿದೆ ಎಂಬ ಸುದ್ದಿ ತಿಳಿದು ಶಾಲೆ ಬಳಿ ವಿದ್ಯಾರ್ಥಿಗಳ ಪೋಷಕರು ಆಗಮಿಸಿದ್ದರು. ಅವರನ್ನು ಶಾಲಾ ಆಡಳಿತ ಮಂಡಳಿ ಸಮಾಧಾನಪಡಿಸಿ ಭಯ ಪಡುವ ಅಗತ್ಯವಿಲ್ಲ. ಇಂದು ಶಾಲೆಗೆ ರಜೆ ನೀಡಲಾಗಿದೆ. ನಾಳೆ ಎಂದಿನಂತೆ ಶಾಲೆ ನಡೆಯಲಿದೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಕಳುಹಿಸಿದರು.