ಮುಂಬೈ,ಮಾ.1- ಜಾರಿನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಸಚಿವ ಹಾಗೂ ಎನ್‍ಸಿಬಿ ನಾಯಕ ನವಾಬ್ ಮಲ್ಲಿಕ್ ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಭೂಗತ ದೊರೆ ದಾವುದ್ ಇಬ್ರಾಹಿಂ ಜತೆಗಿನ ಹಣಕಾಸು ವಹಿವಾಟು ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಕಳೆದ ತಿಂಗಳು ನವಾಬ್ ಮಲ್ಲಿಕ್‍ನನ್ನು ಬಂಧಿಸಿತ್ತು. ಆದರೆ, ಈ ಪ್ರಕರಣ ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತವಾಗಿದ್ದು, ತಮ್ಮ ವಿರುದ್ಧ ದಾಖಲಿಸಿರುವ ಎಫ್‍ಐಆರ್‍ಅನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಈ ನಡುವೆ ಜಾರಿ ನಿರ್ದೇಶನಾಲಯ ನವಾಬ್ ಮಲ್ಲಿಕ್ ಅವರ ಪುತ್ರ ಫರಾಜ್ ಮಲ್ಲಿಕ್‍ಗೆ ಸಮನ್ಸ್ ನೀಡಿದೆ. ಮಲ್ಲಿಕ್ ಅವರ ಸಹೋದರ ಕಫ್ತಾನ್ ಮಲ್ಲಿಕ್‍ಗೂ ನೋಟಿಸ್ ಜಾರಿ ಮಾಡಲಾಗಿದೆ.
ದಾಹುದ್ ಇಬ್ರಾಹಿಂ ಅವರ ಸಹೋದರಿ ಹಸೀನಾ ಪಾರ್ಕರ್ ಅವರ ಮನೆಯ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಲ್ಲಿ ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದೆ.
ಹೀಗಾಗಿ ಬಂಧಿತರಾಗಿರುವ ನವಾಬ್ ಮಲ್ಲಿಕ್ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಬಂಧಿತ ಸಚಿವ ನವಾಬ್ ಮಲ್ಲಿಕ್ ಅವರಿಂದ ರಾಜೀನಾಮೆ ಪಡೆಯಬೇಕೆಂದು ಬಿಜೆಪಿ ಆಗ್ರಹಿಸಿದೆ. ಅದನ್ನು ಆಡಳಿತಾರೂಢ ಮಹಾವಿಕಾಸ್ ಅಗಡಿ ತಳ್ಳಿ ಹಾಕಿದೆ.
