ಸಿಡಿ ಪ್ರಕರಣದ ತನಿಖೆಗೆ ಎಸ್‍ಐಟಿ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ: ಬೊಮ್ಮಾಯಿ

ಬೆಂಗಳೂರು,ಮಾ.13- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಕುರಿತಂತೆ ತನಿಖೆ ನಡೆಸಲು ಎಸ್‍ಐಟಿ (ವಿಶೇಷ ತನಿಖಾ ದಳ)ಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಎಸ್‍ಐಟಿಗೆ ಸೂಚನೆ ನೀಡಲಾಗಿದೆ. ಸಿ.ಡಿ ಬಿಡುಗಡೆ ಹಿಂದೆ ಯಾರಿದ್ದಾರೆ? ಅವರ ಉದ್ದೇಶವಾದರೂ ಏನು? ಎಲ್ಲವೂ ಬಯಲಾಗಬೇಕು ಎಂದರು.

ಎಸ್‍ಐಟಿಗೆ ಸಂಪೂರ್ಣವಾದ ಸ್ವಾತಂತ್ರ್ಯ ನೀಡಿದ್ದೇವೆ. ಅವರು ಮುಕ್ತವಾಗಿ ಯಾರನ್ನಾದರೂ ಬೇಕಾದರೂ ವಿಚಾರಣೆಗೆ ಗುರಿಪಡಿಸಬಹುದು. ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಎಸ್‍ಐಟಿಯು ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿರುವ ಈ ಹಂತದಲ್ಲಿ ನಾನು ಏನನ್ನೂ ಹೇಳಬಯಸುವುದಿಲ್ಲ. ತನಿಖೆ ನಡೆಯುತ್ತಿರುವುದರಿಂದ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ನಾನು ಏನೇ ಹೇಳಿಕೆ ಕೊಟ್ಟರೂ ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಹೇಳಿಕೆ ಕೊಡುವುದು ಅಷ್ಟು ಸಮಂಜಸವಲ್ಲ. ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.