ಬೆಂಗಳೂರು,ಜ.14- ಮುಂದಿನ ತಿಂಗಳ ಫೆಬ್ರವರಿ 17ರಂದು ಪ್ರಸ್ತಕ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಮುಂಬರುವ ಚುನಾವಣೆಗೆ ಇದು ಎಲೆಕ್ಷನ್ ಬಜೆಟ್ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಚುನಾವಣಾ ವರ್ಷ ಆಗಿರುವ ಸಹಜವಾಗಿ ಜನಪರವಾದ ಯೋಜನೆಗಳನ್ನು ಘೋಷಣೆ ಮಾಡಬೇಕಾಗುತ್ತದೆ. ಕಾಲಮಿತಿಯೊಳಗೆ ಅನುಷ್ಠಾನ ಮಾಡಬಹುದಾದ ಘೋಷಣೆಗಳನ್ನು ಮಾಡುತ್ತೇವೆ. ಮಂಗಳವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಂದು ದಿನಾಂಕವನ್ನು ನಿಗದಿ ಮಾಡುವುದಾಗಿ ತಿಳಿಸಿದರು.
ಪ್ರಮುಖವಾಗಿ ದುಡಿಯುವ ವರ್ಗಕ್ಕೆ ಸಹಾಯವಾಗುವ ಕೆಲಸ ಮಾಡುತ್ತೇವೆ. ಪ್ರತಿಯೊಂದು ಕುಟುಂಬಕ್ಕೆ ಮನೆ ನಡೆಸುವ ಕಾರ್ಯಕ್ಕೆ ಹೆಣ್ಣು ಮಕ್ಕಳ ಹೆಸರಿನಲ್ಲಿ ಯೋಜನೆ ತರುತ್ತೇವೆ. ಸ್ತೀಶಕ್ತಿ, ಸ್ತ್ರೀ ಸಾಮಥ್ರ್ಯ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದರು.
ನಾಲಿಗೆ ಕಟ್ ಮಾಡಬೇಕಾಗುತ್ತೆ ಹುಷಾರ್ : ಯತ್ನಾಳ್ಗೆ ನಿರಾಣಿ
ಕೇಂದ್ರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಬೆಂಬಲ ಸಿಗಲಿದೆ. ಬಜೆಟ್ನಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಲಿದ್ದೇವೆ. ಸ್ತ್ರೀ ಸಾಮಥ್ರ್ಯ ಕಾರ್ಯರೂಪಕ್ಕೆ ತರುವ ಬದ್ದತೆ ಹೊಂದಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀರಿಕ್ಷೆ ಮಾಡಿದ್ದೇವೆ. ಈಗಾಗಲೇ ಕೇಂದ್ರ ವಿತ್ತ ಸಚಿವರ ಜೊತೆ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುವ ಕಾಂಗ್ರೆಸ್ ಘೋಷಣೆ ಬಗ್ಗೆ ಕಿಡಿಕಾರಿದ ಸಿಎಂ ಬೊಮ್ಮಾಯಿ ಅವರು, ಎಸ್ಕಾಂಗಳನ್ನು ಸಾಲದ ಸುಳಿಗೆ ನೂಕಿದ್ದು ಕಾಂಗ್ರೆಸ್ ಕೊಡುಗೆ. ನಮ್ಮ ಸರ್ಕಾರ ಎಸ್ಕಾಂ ಮತ್ತು ಪವರ್ ಸೆಂಟರ್ಗೆ ಆರ್ಥಿಕ ಸಹಾಯ ಮಾಡಿದ್ದಕ್ಕೆ ಇಂದು ಈ ಹಂತಕ್ಕೆ ನಿಂತಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ನವರಿಗೆ ಯಾವುದು ಕಾರ್ಯರೂಪಕ್ಕೆ ಬರುವುದಿಲ್ಲ ಎಂಬುದು ಚೆನ್ನಾಗಿ ಗೊತ್ತಿದೆ. ಆದರೂ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಘೋಷಣೆ ಮಾಡಿದ ಯೋಜನೆಗೆ ಹಣದ ಕೊರತೆಯಾಗುತ್ತದೆ ಎಂದು ಕಿಡಿಕಾರಿದರು.
ಸದಾಶಿವ ಆಯೋಗ, ಕಾಂತರಾಜು ಆಯೋಗ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡಿ ಪ್ರವರ್ಗ 2 ಕ್ಕೆ ಸೇರಿಸಲು ಮುಂದಾಗಿದ್ದೇವೆ. ಹೆಚ್ಚಳ ಮಾಡುವುದಕ್ಕೆ ಸುಪ್ರೀಂಕೋರ್ಟ್ ಮತ್ತು ಸಂವಿಧಾನದಲ್ಲಿ ಕೆಲವು ನಿಯಮಗಳಿವೆ. ಅದನ್ನು ಕೂಡ ಆದಷ್ಟು ಬೇಗ ಮಾಡಲಿದ್ದೇವೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ಅಧ್ಯಕ್ಷರಾದ ಕಾಶಪ್ಪನವರ್ ಕೂಡ ಶಾಸಕರಾಗಿದ್ದವರು. ಅವರ ತಂದೆ ಮಂತ್ರಿಯಾಗಿದ್ದರು. ಅವರು ಏಕೆ ಮೀಸಲಾತಿ ಜಾರಿ ಮಾಡಲಿಲ್ಲ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ವರದಿಯನ್ನೇ ತಿರಸ್ಕಾರ ಮಾಡಲಾಯಿತು.
ಮೀಸಲಾತಿ ಮಾಡೋಕೆ ಬರುವುದಿಲ್ಲ ಎಂದು ಹೇಳಿದ್ದರು. ಆಗ ಯಾಕೆ ಬಾಯಿ ತೆಗೆದು ಮಾತನಡಲಿಲ್ಲ .ಈಗ ಅವರಿಗೆ ಯಾವ ನೈತಿಕತೆ ಇದೆ ಎಂದು ಪರೋಕ್ಷವಾಗಿ ವಿಜಯನಂದ ಕಾಶಪ್ಪನವರ್ ವಿರುದ್ಧ ಕಿಡಿಕಾರಿದರು.
ಅವರ ಅಕ್ಕಪಕ್ಕ ಯಾರಿದ್ದಾರೆ ಎಂದು ಸ್ವಾಮೀಜಿ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಚಿವ ಮುರುಗೇಶ್ ನಿರಾಣಿ ವಿರುದ್ದ ಯತ್ನಾಳ್ ಪಿಂಪ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಜನಮನ್ನಣೆ ಪಡೆದುಕೊಂಡು ಬಂದಿರುವುದು. ವೈಯಕ್ತಿಕ ನಿಂದನೆ ಸರಿಯಲ್ಲ. ಇದು ಕರ್ನಾಟಕದ ಸಂಸ್ಕೃತಿಯಲ್ಲ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
#Budget2023, #BasavarajBommai, #BJPGovt,