ರಾಜ್ಯದ ಸಮಗ್ರ ಅಭಿವೃದ್ಧಿ ಸರ್ಕಾರದ ಗುರಿ : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಜ.28- ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿಯೊಬ್ಬರು ಸ್ವಾಭಿಮಾನ, ಸ್ವಾವಲಂಬ ನೆಯ ಜೀವನ ನಡೆಸಲು ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಸಮಗ್ರ ಅಭಿವೃದ್ದಿ ಪಥದತ್ತ ಕೊಂಡೊಯ್ಯುವುದೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಪಥ ಮಾಡಿದರು.
ಕಳೆದ ಆರು ತಿಂಗಳು ನಮಗೆ ಪರೀಕ್ಷಾ ಸಮಯವಾಗಿತ್ತು. ಈಗ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇಲು-ಕೀಳು ತಾರತಮ್ಯವಿಲ್ಲದೆ ಎಸ್ಸಿಎಸ್ಟಿ, ಹಿಂದುಳಿದವರು, ಯುವಕರು, ಮಹಿಳೆಯರು, ವಯಸ್ಕರು ಸೇರಿದಂತೆ ಎಲ್ಲರೂ ಸ್ವಾಭಿಮಾನದಿಂದ ಬದುಕುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ ಅಕಾರ ವಹಿಸಿಕೊಂಡ 6 ತಿಂಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಭವ್ಯ ಭವಿಷ್ಯಕ್ಕಾಗಿ ಭರವಸೆಯೆ ಹೆಜ್ಜೆಗಳು, ತಿಂಗಳು 6, ನಿರ್ಣಯಗಳು ನೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಮ್ಮ ಸುದೀರ್ಘ ಭಾಷಣದಲ್ಲಿ ಸಿಎಂ ಬೊಮ್ಮಾಯಿ ಅವರು, ತಮ್ಮ ಮುಂದಿರುವ ಸವಾಲುಗಳು, ಕೋವಿಡ್ 3ನೇ ಅಲೆ, ನಾಡಿನ ಅನ್ನದಾತನ ಬದುಕು ಹಸನುಗೊಳಿಸುವುದು, ಕೈಗಾರಿಕೆಗಳ ಬೆಳವಣಿಗೆ, ಕೃಷಿಗೆ ಉತ್ತೇಜನ, ಶಿಕ್ಷಣ,ಉದ್ಯೋಗ, ಆರೋಗ್ಯ, ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ ಮಾಡುವ ಶಪಥ ಮಾಡಿದರು.
ಅಭಿವೃದ್ಧಿಯಲ್ಲಿ ಯಾರಿಗೂ ತಾರತಮ್ಯ ಎಸಗುವುದಿಲ್ಲ. ಎಲ್ಲರ ಕಲ್ಯಾಣವೆ ನಮ್ಮ ಸರ್ಕಾರದ ಗುರಿ. ಸಾಮಾಜಿಕ ನ್ಯಾಯ ಎಂಬುದು ಕೇವಲ ರಾಜಕೀಯ ಘೋಷಣೆಗೆ ಸೀಮಿತವಾಗಬಾರದು. ಜನರಿಗೆ ಕಾರ್ಯಕ್ರಮಗಳನ್ನು ನೀಡಿ ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ಮಾಡಬೇಕು. ಮಧ್ಯವರ್ತಿಗಳ ಹಾವಳಿಯಿಲ್ಲದೆ ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಮಾಡುವುದೇ ಸಾಮಾಜಿಕ ನ್ಯಾಯದ ಅರ್ಥ ಎಂದು ಅಭಿಪ್ರಾಯಪಟ್ಟರು.
ನಮ್ಮದು ಮಾನವೀಯತೆಯ ಸರ್ಕಾರ. ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರವನ್ನು ನೀಡಿದ್ದೇವೆ. ಸರ್ಕಾರಕ್ಕೆ ಎಷ್ಟೇ ಕಷ್ಟ ಇದ್ದರೂ ರೈತರನ್ನು ಕೈಬಿಡುವುದಿಲ್ಲ. ಅಂತಃಕರಣದ ಇನ್ನೊಂದು ಮುಖ ವೃದ್ಧಾಪ್ಯ, ಅಂಗವಿಕಲರು, ವಿಧವೆಯರಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ.
ರೈತರ ಮಕ್ಕಳು , ಕೃಷಿ ಜೊತೆಗೆ ಬೇರೆ ಉದ್ಯೋಗ ಮಾಡಲು ಶಿಕ್ಷಣಕ್ಕೆ ರೈತ ವಿದ್ಯಾನಿ ಯೋಜನೆ ಜಾರಿ ಮಾಡಿದ್ದು, 4 ಲಕ್ಷ ವಿದ್ಯಾರ್ಥಿಗಳು ಲಾಭ ಪಡೆಯುತ್ತಿದ್ದಾರೆ. ಕಾರ್ಮಿಕ ಮಕ್ಕಳಿಗೂ ವಿದ್ಯಾನಿ ಯೋಜನೆ ಜಾರಿಗೊಳಿಸಲಾಗುವುದು. ಜನರನ್ನು ಫಲಾನುಭವಿಗಳನ್ನಾಗಿ ಮಾಡುವ ಬದಲು ಪಾಲುದಾರರನ್ನಾಗಿ ಮಾಡಬೇಕು. ದುಡಿಯುವ ವರ್ಗದವರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ. ದುಡ್ಡೇ ದೊಡ್ಡಪ್ಪ ಅಲ್ಲ. ದುಡಿಮೆಯೇ ದೊಡ್ಡಪ್ಪ ಎಂದು ಹೇಳಿದರು.
ಭಾರತದ ಎಫ್‍ಡಿಐ ಶೇ.45ರಷ್ಟು ಕರ್ನಾಟಕದಲ್ಲಿದೆ. ಶೇ.50ರಷ್ಟು ಸಾರ್ಟಪ್‍ಗಳು ನಮ್ಮ ರಾಜ್ಯದಲ್ಲಿದೆ. ಕೃಷಿಯಲ್ಲಿ ಶೇ.1ರಷ್ಟು ಅಭಿವೃದ್ಧಿ ಮಾಡಿದರೆ ಕೈಗಾರಿಕೆಯಲ್ಲಿ ಶೇ.4ರಷ್ಟು ಅಭಿವೃದ್ಧಿಯಾಗುತ್ತದೆ. ಇದರಿಂದ ಶೇ.10ರಷ್ಟು ಸೇವಾ ವಲಯದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮುಂದಿನ ದಿನಗಳಲ್ಲಿ ಎಸ್ಸಿ ಎಸ್ಟಿ, ಒಬಿಸಿ ಸಮುದಾಯಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಬಜೆಟ್‍ನಲ್ಲಿ ಎಲ್ಲವನ್ನು ವಿವರಿಸಲಾಗುವುದು. ಎನ್‍ಇಪಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ವಾಕ್ಸಿನೇಷನ್‍ನಲ್ಲಿ ಶೇ.100ರಷ್ಟು ಸಾಧನೆ ಮಾಡಿದ ರಾಜ್ಯ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದೇವೆ. ವಿ ಆರ್ ದ ಲೀಡರ್ಸ್ ಟು ಚೇಂಜ್ ದಿ ನೇಷನ್ ಎಂದರು.
371 ಜೆ ನಂಜುಂಡಪ್ಪ ವರದಿಗೆ ಮೀಸಲಿಟ್ಟ ಹಣ ಖರ್ಚಾಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೀಸಲಿಟ್ಟ ಹಣ ಖರ್ಚು ಮಾಡಿದರೆ ಮುಂದಿನ ಬಜೆಟ್‍ನಲ್ಲಿ ಮೂರು ಸಾವಿರ ಕೋಟಿ ಹೆಚ್ಚುವರಿಯಾಗಿ ನೀಡಲಾಗುವುದು.
ವಸತಿ ಇಲಾಖೆಯಲ್ಲಿ ಬಾಕಿ ಉಳಿದಿದ್ದ 6.5 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ನಮ್ಮದು ನಿರ್ಧಾರ ತೆಗೆದುಕೊಳ್ಳುವ ಸರ್ಕಾರ. ಆಡಳಿತ ಫುಟ್ಬಾಲ್ ಇದ್ದ ಹಾಗೆ. ಬಾಲ್ ನಮ್ಮ ಬಳಿ ಬಂದಾಗ ಪಾಸ್ ಆನ್ ಮಾಡುವ ಕಲೆ ಬೇಕು. ನಮ್ಮ ಟೀಮ್‍ಗೆ ಡಿಫೆನ್ಸ್ ಮಾಡುವುದು ಗೊತ್ತು, ಆಕ್ರಮಣಕಾರಿ ಆಟ ಆಡುವುದು ಗೊತ್ತು. ನಮ್ಮ ಸಂಪುಟದಲ್ಲಿ ಯಾವುದೇ ಏರುಪೇರಿಲ್ಲ. ನಮ್ಮಲ್ಲಿ ಒಗ್ಗಟ್ಟಿದೆ. ಪ್ರಗತಿಪರವಾದ ಶಾಸಕರ ಸಮೂಹ ನಮ್ಮ ಜೊತೆಗಿರುವುದು ನನ್ನ ಭಾಗ್ಯ ಎಂದರು.
ಪ್ರಧಾನಿ ಮೋದಿ ಅವರ ಕನಸು ಬಲಿಷ್ಠ ಕರ್ನಾಟಕ ನಿರ್ಮಾಣ ಮಾಡುವುದಾಗಿದೆ. ಅದನ್ನು ಈಡೇರಿಸಲು ದಿನದ 24 ಗಂಟೆ ಕೆಲಸ ಮಾಡುತ್ತೇವೆ. ಎಲ್ಲ ಕೆಲಸಗಳ ಹಿಂದೆ ನಮ್ಮ ನಾಯಕರಾದ ಯಡಿಯೂರಪ್ಪನವರ ಮಾರ್ಗದರ್ಶನವಿದೆ ಎಂದು ಹೇಳಿದರು.
ಕಟ್ಟಕಡೆಯ ಮನುಷ್ಯರನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ನಿಜವಾದ ವಿಕೇಂದ್ರೀಕರಣ ಸರ್ಕಾರ. ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಗೃಹ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸಾಮಾಜಿಕ, ಆರ್ಥಿಕ ಬದಲಾವಣೆ ಕುರಿತು ಐಸಾಕ್ ಕೆಲವು ಸಲಹೆಗಳನ್ನು ನೀಡಿದೆ. ಅದನ್ನು ಸ್ವೀಕರಿಸಲು ನಾವು ಸಿದ್ದರಿದ್ದೇವೆ.
ಉತ್ತರ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಉದ್ಯೋಗಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಆರು ತಿಂಗಳಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ಅಮೃತ ಯೋಜನೆ ಅನುಷ್ಠಾನ ಮಾಡಿದ್ದೇವೆ. ಗ್ರಾಮಗಳ ಮೂಲ ಸೌಕರ್ಯ ಹೆಚ್ಚಿಸಿದ್ದೇವೆ. ಕೋವಿಡ್‍ನಿಂದ ಮೃತರಾದವರಿಗೆ ಪರಿಹಾರ ನೀಡಿದ್ದೇವೆ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಅಂತಃಕರಣದಿಂದ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಕೆ.ಎಸ್.ಈಶ್ವಪ್ಪ, ಎಸ್.ಟಿ.ಸೋಮಶೇಖರ್, ಉಮೇಶ್ ಕತ್ತಿ, ಸುಧಾಕರ್, ಭೈರತಿ ಬಸವರಾಜ್, ಅಂಗಾರ, ಆನಂದ್ ಸಿಂಗ್, ಕೆ.ಗೋಪಾಲಯ್ಯ, ಶಂಕರ್ ಪಾಟೀಲ್ ಮುನೇನಕೊಪ್ಪ, ಪ್ರಭು ಚವ್ಹಾಣ್, ಬಿ.ಸಿ.ನಾಗೇಶ್, ಅರಗ ಜ್ಞಾನೇಂದ್ರ ಮತ್ತಿತರರು ಇದ್ದರು.

Articles You Might Like

Share This Article