ಮಾರ್ಗಸೂಚಿ ಕಟ್ಟುನಿಟ್ಟು ಜಾರಿ ಪೊಲೀಸರ ಜವಾಬ್ದಾರಿ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು,ಏ.21- ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಹರಡುವುದನ್ನು ತಡೆಯಲು ಹೊಸ ಮಾರ್ಗಸೂಚಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಕಾರಿಗಳಿಗೆ ಜವಾಬ್ದಾರಿ ವಹಿಸಲಾ ಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಇತರೆ ಜಿಲ್ಲೆಗಳಲ್ಲಿ ಕೋವಿಡ್ ನಿಯಮವನ್ನು ಪರಿಪಾಲನೆ ಮಾಡುವ ಸಂಬಂಧ ಸಭೆ ನಡೆಸಿ ಅಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರ ಪ್ರಕಟ ಮಾಡಿರುವ ಮಾರ್ಗಸೂಚಿ ಪಾಲನೆಗೆ ಜನರ ಸಹಕಾರ ಅತ್ಯಗತ್ಯ. ಜನರು ನಿಯಮಗಳನ್ನು ಪಾಲನೆ ಮಾಡುವ ಮೂಲಕ ನಿಮ್ಮ, ಸಮಾಜದ ಹಾಗೂ ರಾಜ್ಯದ ಆರೋಗ್ಯವನ್ನು ಕಾಪಾಡಬೇಕು. ನಿಯಮಗಳ ಪರಿಪಾಲನೆಯಲ್ಲೇ ಜನರ ಆರೋಗ್ಯವೂ ಅಡಗಿದೆ ಎಂಬುದನ್ನು ತಿಳಿಯಬೇಕು ಎಂದು ತಿಳಿಸಿದರು.

ಈಗಾಗಲೇ ಜಾರಿಗೆ ತಂದಿರುವ ರಾತ್ರಿ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಅನಗತ್ಯವಾಗಿ ಓಡಾಟ ಮಾಡುವುದನ್ನು ನಿಲ್ಲಿಸಬೇಕು, ಮಾರುಕಟ್ಟೆ ಪ್ರದೇಶಗಳಲ್ಲಿ ಜನ ಸಂದಣಿ ಹೆಚ್ಚಾಗದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.

ಅಲ್ಲದೆ, ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಸರ್ಕಾರರೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.