ಜನಪ್ರಿಯ ಬಜೆಟ್‍ ಮಂಡಿಸಲು ಸಿಎಂ ಬೊಮ್ಮಾಯಿ ಭಾರೀ ತಯಾರಿ

Social Share

ಬೆಂಗಳೂರು,ಫೆ.16- ಕೊರೊನಾ ಲಾಕ್‍ಡೌನ್‍ನಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಕೇಂದ್ರದ ಸಹಾಯಾನುದಾನಕ್ಕೂ ಕತ್ತರಿ ಬಿದ್ದಿದೆ. ಸಂಪನ್ಮೂಲ ಕ್ರೋಢೀಕರಣ ಮಾರ್ಗ ಗಳೆಲ್ಲವೂ ನಿರೀಕ್ಷಿತ ಗುರಿ ಮುಟ್ಟದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಮಧ್ಯೆ ಮುಖ್ಯಮಂತ್ರಿಗಳಿಗೆ
ಬದ್ಧ ವೆಚ್ಚ ಕಗ್ಗಂಟಾಗಿ ಪರಿಣಮಿಸಿದೆ.
ಮಾರ್ಚ್ ಮೊದಲ ವಾರದಲ್ಲಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿಯ ಬಜೆಟ್ 2023ರ ವಿಧಾನಸಭೆ ಚುನಾವಣೆಗೂ ಮುನ್ನ ಮಂಡಿಸಲಿರುವ ಪೂರ್ಣ ಪ್ರಮಾಣದ ಆಯವ್ಯಯವಾಗಿದೆ. ಆರ್ಥಿಕ ಸಂಕಷ್ಟ ಸಿಎಂಗೆ ಎದುರಾಗಿರುವ ದೊಡ್ಡ ಸವಾಲು. ಆದಾಯ ಮೂಲಗಳು ಬರಿದಾಗಿದ್ದು, ಜನಪ್ರಿಯ ಬಜೆಟ್ ಮಂಡಿಸುವ ಜರೂರತ್ತು ಬಿಜೆಪಿ ಸರ್ಕಾರಕ್ಕಿದೆ.
ಸಿಎಂಗೆ ಬದ್ಧ ವೆಚ್ಚದ ತಲೆನೋವು: ಸೀಮಿತ ಸಂಪನ್ಮೂಲದ ಮಧ್ಯೆ ಅಳೆದು ತೂಗಿ ಸಿಎಂ ಬಜೆಟ್ ಮಂಡಿಸುವ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಈ ಮಧ್ಯೆ ಮಿತಿ ಮೀರಿದ ಬದ್ಧ ವೆಚ್ಚವನ್ನು ನಿಭಾಯಿಸುವುದೇ ಸಿಎಂ ಬೊಮ್ಮಾಯಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸರ್ಕಾರಿ ನೌಕರರ ವೇತನ, ಪಿಂಚಣಿ, ಬಡ್ಡಿ ಪಾವತಿ, ಆಡಳಿತ ವೆಚ್ಚ, ಸಹಾಯಧನವನ್ನು ಬದ್ಧ ವೆಚ್ಚವೆಂದು ಕರೆಯುತ್ತಾರೆ. ಈ ಮಿತಿ ಮೀರಿದ ಬದ್ಧ ವೆಚ್ಚ ಬಜೆಟ್ ಲೆಕ್ಕಾಚಾರವನ್ನು ಬುಡಮೇಲಾಗಿಸಿದೆ. ಬಜೆಟ್ ಬಹುಪಾಲು ಬದ್ಧ ವೆಚ್ಚಕ್ಕೇ ತಗುಲುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸುವುದೇ ದುಸ್ತರವಾಗಿದೆ.
ರಾಜಸ್ವ ಸ್ವೀಕಾರದ ಬದ್ಧ ವೆಚ್ಚವೇ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಗಳಿಗೆ ವ್ಯಯಿಸಬೇಕಾದ ಬಜೆಟ್ ಹಣದಲ್ಲಿ ಬಹುಪಾಲು ಬದ್ಧ ವೆಚ್ಚಕ್ಕೆ ತಗುಲುತ್ತಿದೆ. ಇದರ ನಿರ್ವಹಣೆ ಸಿಎಂಗೆ ನಿದ್ದೆಗೆಡಿಸಿದೆ. ಬದ್ಧ ವೆಚ್ಚದ ಜೊತೆಗೆ ಅಭಿವೃದ್ಧಿ ಕೆಲಸಗಳಿಗೆ ಬಜೆಟ್‍ನಲ್ಲಿ ಹಣ ಹೊಂದಿಸುವುದಕ್ಕೆ ಬೊಮ್ಮಾಯಿ ಕಸರತ್ತು ನಡೆಸುತ್ತಿದ್ದಾರೆ. ಬದ್ಧ ವೆಚ್ಚವನ್ನು ಕಡಿತಗೊಳಿಸುವ ನಾನಾ ಮಾರ್ಗೋಪಾಯಗಳ ಹುಡುಕಾಟದಲ್ಲೇ ತಲೆ ಕೆಡಿಸಿಕೊಂಡಿದ್ದಾರೆ.
ಬೊಕ್ಕಸದ ಮೇಲೆ ಬದ್ಧ ವೆಚ್ಚದ ಹೊರೆ ಹೇಗಿದೆ?: ಮಧ್ಯಮಾವ ವಿತ್ತೀಯ ಯೋಜನೆ 2021-2025ರ ಪ್ರಕಾರ ರಾಜ್ಯದಲ್ಲಿನ ಬದ್ಧ ವೆಚ್ಚ ಹೊರೆ ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಇದರಿಂದ ಬಜೆಟ್ ಅನುಷ್ಠಾನವೇ ಬುಡಮೇಲಾಗುತ್ತಿದೆ. ಬದ್ದ ವೆಚ್ಚ ವರ್ಷವಾರು ಮಿತಿ ಮೀರುತ್ತಿದೆ.
2022-23ರ ಸಾಲಿನಲ್ಲಿ ಬದ್ಧ ವೆಚ್ಚ 2,08,004 ಕೋಟಿ ರೂ.ಗೆ ತಲುಪುವ ಅಂದಾಜು ಮಾಡಲಾಗಿದೆ. ಒಟ್ಟು ರಾಜಸ್ವ ಸಂಗ್ರಹ 1,79,916 ಕೋಟಿ ರೂ. ಅಂದಾಜಿಸಲಾಗಿದೆ. ಅಂದರೆ, ರಾಜಸ್ವ ಸ್ವೀಕೃತಿ ಮುಂದೆ ಬದ್ಧ ವೆಚ್ಚವೇ ಹೆಚ್ಚಾಗಿದ್ದು, ಬರುವ ಆದಾಯಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಬದ್ಧ ವೆಚ್ಚಕ್ಕೇ ವಿನಿಯೋಗಿಸುವ ದುಸ್ಥಿತಿ ಎದುರಾಗಿದೆ.
2019-20ರಲ್ಲಿ ರಾಜ್ಯದ ಬದ್ಧ ವೆಚ್ಚ 1,74,257 ಕೋಟಿ ರೂ. ಇತ್ತು. 2020-21ಸಾಲಿನಲ್ಲಿ ಬದ್ಧ ವೆಚ್ಚ 1,79,195 ಇಷ್ಟಿತ್ತು. ಅದೇ 2021-22ನೇ ಸಾಲಿನಲ್ಲಿ ಬದ್ಧ ವೆಚ್ಚ 1,87,405 ಕೋಟಿ ರೂ.ಗೆ ಏರಿಕೆಯಾಗಿದೆ. ಅದೇ 2022-23 ಸಾಲಿನಲ್ಲಿ ಬದ್ಧ ವೆಚ್ಚ 2,08,004 ಕೋಟಿ ರೂ.ಗೆ ಗಣನೀಯ ಏರಿಕೆಯಾಗಿದೆ. ಮಿತಿ ಮೀರಿದ ಬದ್ಧ ವೆಚ್ಚ ಇದೀಗ ಸಿಎಂ ಬೊಮ್ಮಾಯಿಗೆ ತಲೆನೋವಾಗಿ ಪರಿಣಮಿಸಿದೆ.

Articles You Might Like

Share This Article