ಬೆಂಗಳೂರು,ಫೆ.4- ನಗರದಲ್ಲಿ ಕೊರೊನಾರ್ಭಟ ಕಡಿಮೆಯಾಗುತ್ತಿದ್ದರೂ ಬೊಮ್ಮನಹಳ್ಳಿ ವಲಯ ಮಾತ್ರ ಇನ್ನು ಡೇಂಜರ್ ಜೋನ್‍ನಲ್ಲೇ ಇದೆ.
ಇಂದು ನಗರದಲ್ಲಿ 5679 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಎಂಟು ವಲಯಗಳಲ್ಲಿ 7 ವಲಯಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಾದರೂ ಬೊಮ್ಮನಹಳ್ಳಿ ವಲಯದಲ್ಲಿ ಮಾತ್ರ ಕೊರೊನಾರ್ಭಟ ನಿಂತಿಲ್ಲ.
ಬೊಮ್ಮನಹಳ್ಳಿ ವಲಯ ಒಂದರಲ್ಲೇ ಪ್ರತಿನಿತ್ಯ ಸಾವಿರಾರು ಮಂದಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಇಂದು ಒಂದೇ ದಿನ ಈ ವಲಯದಲ್ಲಿ 1239 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಅಪಾರ್ಟ್‍ಮೆಂಟ್‍ಗಳಿವೆ. ಇಂತಹ ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುತ್ತಿರುವವವರು ಬಹುತೇಕ ಮಂದಿ ಹೊರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವಂತವರು.
ಅಪಾರ್ಟ್‍ಮೆಂಟ್‍ಗಳಿಗೆ ಪ್ರತಿನಿತ್ಯ ಹೊರ ದೇಶ ಮತ್ತು ರಾಜ್ಯಗಳಿಂದ ನೂರಾರು ಮಂದಿ ಆಗಮಿಸುತ್ತಾರೆ. ಮಾತ್ರವಲ್ಲ ಪ್ಲಾಟ್ ನಿವಾಸಿಗಳು ಕೊರೊನಾ ನಿಯಮ ಉಲ್ಲಂಘಿಸುತ್ತಿರುವುದರಿಂದಲೇ ಈ ವಲಯದಲ್ಲಿ ಸೋಂಕು ಹೆಚ್ಚಳಗೊಳ್ಳಲು ಕಾರಣ ಎನ್ನಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ಸೋಂಕು ತಡೆಗಟ್ಟಲು ಏನೆ ಕಸರತ್ತು ನಡೆಸಿದರೂ ಅದು ಪ್ರಯೋಜನಕಾರಿಯಾಗುತ್ತಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ವಲಯದಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.
