ಬೆಂಗಳೂರು,ಜು.4– ಕಾರ್ಮಿಕ ಇಲಾಖೆಯ ವತಿಯಿಂದ ಜನಜಾಗೃತಿಗಾಗಿ ಮುದ್ರಿಸಲಾದ ಪುಸ್ತಕಗಳು ರದ್ದಿ ಅಂಗಡಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಪಟ್ಟಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರಿಗಾಗಿ ರೂಪಿಸಲಾಗಿರುವ ವಿವಿಧ ಯೋಜನೆಗಳ ಕುರಿತ ಪುಸ್ತಕಗಳ ಚೀಲಗಳು ರದ್ದಿ ಅಂಗಡಿಯಲ್ಲಿ ಪತ್ತೆಯಾಗಿದ್ದು, ಜನರಿಗೆ ದೊರೆಯಬೇಕಾದ ಮಾಹಿತಿ ಈ ರೀತಿ ವ್ಯರ್ಥವಾಗುತ್ತಿರುವ ಬಗ್ಗೆ ಆಕ್ರೋಶ ಕೇಳಿಬಂದಿದೆ.
ಕಾರ್ಮಿಕರ ಮಕ್ಕಳಿಗೆ ಪುಸ್ತಕ ಹಂಚುವ ಯೋಜನೆ ಕುರಿತ ಮಾಹಿತಿ , ಕಾರ್ಮಿಕರಿಗೆ ಅಗತ್ಯ ಸಲಕರಣೆ ನೀಡುವ ಯೋಜನೆ, ಸಂಚಾರಿ ಕ್ಲಿನಿಕ್ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ಇರುವ ಪುಸ್ತಕಗಳು ರಾಶಿರಾಶಿಯಾಗಿ ರದ್ದಿ ಅಂಗಡಿಯಲ್ಲಿ ಪತ್ತೆಯಾಗಿವೆ. ಈ ಪುಸ್ತಕಗಳನ್ನು ಕೆಜಿಗೆ 70 ರೂ.ಗಳಂತೆ ಮಾರಾಟ ಮಾಡಲಾಗಿದೆ.
ಆ ಪುಸ್ತಕಗಳಲ್ಲಿ ಬಹಳಷ್ಟು ಬಳಕೆಯಾಗಿಲ್ಲ. ಮುದ್ರಕರು ಪುಸ್ತಕಗಳ ಮೇಲೆ ಹಾಕಿಕೊಟ್ಟಿದ್ದಂತಹ ಪ್ಲಾಸ್ಟಿಕ್ ರ್ಯಾಪರ್ ಕೂಡ ತೆರೆಯದೆ ರದ್ದಿ ಅಂಗಡಿಗೆ ರವಾನಿಸಲಾಗಿದೆ ಎಂಬ ಆರೋಪಗಳಿವೆ. ಈ ಹಗರಣಕ್ಕೆ ಯಾರು ಹೊಣೆ?, ತನಿಖೆ ಮಾಡುವರ್ಯಾರು? ಎಂದು ಸಂಘಟನೆಗಳ ಮುಖಂಡರು ಕಿಡಿಕಾರಿದ್ದಾರೆ. 2023 ರಿಂದಲೂ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸರ್ಕಾರ ಕಾರ್ಮಿಕರಿಗೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವ ಪರಿಕರಗಳನ್ನು ವ್ಯರ್ಥ ಮಾಡುತ್ತಿವೆ. ಇತ್ತ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಪ್ರತಿನಿತ್ಯ ಕಾರ್ಮಿಕರ ಪರವಾಗಿ ಕೆಲಸ ಮಾಡುವುದಾಗಿ ಹೇಳಿಕೊಳ್ಳುವ ಸಚಿವ ಸಂತೋಷ್ ಲಾಡ್ ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ