ಕೋವಿಡ್ ಹೆಚ್ಚಳ : 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್

Social Share

ಬೆಂಗಳೂರು,ಆ.11- ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.7.2ರಷ್ಟಿದ್ದು, 18 ವರ್ಷ ಮೇಲ್ಪಟ್ಟವರು 3ನೇ ಡೋಸ್‍ನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪಡೆಯ ಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿಂದು ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.17ರಷ್ಟು ಮಾತ್ರ 3ನೇ ಡೋಸ್ ಲಸಿಕೆ ಪಡೆದಿದ್ದಾರೆ. ಕೋವಿಡ್ ಹೋಗಿದೆ ಎಂದು ಉದಾಸೀನ ಮಾಡದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.

ಹೈದರಾಬಾದ್ ಮೂಲದ ಸಂಸ್ಥೆಹೊಸದಾಗಿ ಕಾರ್ಬೋ ವ್ಯಾಕ್ಸ್‍ನ್ನು ಸಂಶೋಧಿಸಿದೆ. ಇದಕ್ಕೆ ಕೇಂದ್ರ ಅನುಮತಿ ನೀಡಿದ್ದು, ಈ ಲಸಿಕೆ ಪಡೆಯಲು ಅವಕಾಶವಿದೆ. ರಾಜ್ಯದಲ್ಲೂ ಕೂಡ ಚಾಲನೆ ನೀಡಲಾಗುವುದು ಎಂದರು.

ಆ.1ರಿಂದ 10ರ ಅವಧಿಯಲ್ಲಿ ಕೋವಿಡ್ ರೋಗದಿಂದ 24 ಮಂದಿ ಮೃತಪಟ್ಟಿದ್ದು, ಅವರಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿದ್ದಾರೆ. ಕೋವಿಡ್ ಪಾಸಿಟಿವ್ ಬಂದರೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕು. ತೀವ್ರತರದ ವ್ಯಾವುಳ್ಳವರು 3ನೇ ಡೋಸ್‍ನ್ನು ಜರೂರಾಗಿ ಪಡೆಯಬೇಕು ಎಂದರು.

ದೆಹಲಿಯಲ್ಲಿ ಕೋವಿಡ್ ಪಾಸಿವಿಟಿ ಶೇ.15ರಷ್ಟಿದೆ. ಬೆಂಗಳೂರು ಸೇರಿದಂತೆ ನಗರಪ್ರದೇಶಗಳಲ್ಲಿ ಶೇ.7.2ಕ್ಕಿಂತ ಜಾಸ್ತಿಯಿದ್ದು, ಶೇ.10ರವರೆಗೆ ಇದೆ. ಧಾರವಾಡದಲ್ಲಿ ಅತಿಹೆಚ್ಚಿದೆ. ನಿತ್ಯ 30 ಸಾವಿರ ಕೋವಿಡ್ ಪರೀಕ್ಷೆ ಮಾಡಲಗುತ್ತಿದೆ. ರೋಗ ಲಕ್ಷಣವಿದ್ದವರು ಹಾಗೂ ಪ್ರಾಥಮಿಕ ಸಂಪರ್ಕವುಳ್ಳವರಿಗೆ ಲಕ್ಷಣ ಕಂಡುಬಂದರೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಈಗಾಗಲೇ 1 ಮತ್ತು 2ನೇ ಡೋಸ್‍ನ್ನು ಶೇ.100ರಷ್ಟು ಪಡೆದಿದ್ದಾರೆ. 3ನೇ ಡೋಸ್‍ನ್ನು ಉಚಿತವಾಗಿ ಪಡೆಯಬಹುದಾಗಿದೆ. ಲಸಿಕೆ ಪಡೆದ ಆರೇಳು ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. 3ನೇ ಡೊಸ್ ಲಸಿಕೆ ಪಡೆದರೆ ರೋಗ ಬಂದರೂ ಅದರ ತೀವ್ರತೆ ಕಡಿಮೆಯಿದ್ದು ಸಾವಿನ ಪ್ರಮಾಣ ವಿರಳ ಎಂದು ಹೇಳಿದರು.

ಮಂಕಿಪಾಕ್ಸ್: ದೆಹಲಿಯಲ್ಲಿ 4, ಕೇರಳದಲ್ಲಿ 5 ಸೇರಿದಂತೆ ದೇಶದಲ್ಲಿ 9 ಮಂಕಿ ಪಾಕ್ಸ್ ಪ್ರಕರಣಗಳು ದಾಖಲಾಗಿವೆ. ಆದರೆ ರಾಜ್ಯದಲ್ಲಿ ಈವರೆಗೆ ಒಂದು ಪ್ರಕರಣವೂ ಪತ್ತೆಯಾಗಿಲ್ಲ. ಆದರೂ ಗಡಿಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸಲಾಗುವುದು. ಆಸ್ಪತ್ರೆಯಲ್ಲಿ ಔಷಧಿ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದರು.

ಈ ಬಾರಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಮಲೆರಿಯಾ, ಚಿಕನ್‍ಗುನ್ಯ, ಡೆಂಗ್ಯೂ, ಎಚ್‍ಎನ್1 ಪ್ರಕರಣಗಳು ಹೆಚ್ಚಾಗಿವೆ.

114 ಮಲೇರಿಯಾ, 978 ಚಿಕನ್‍ಗುನ್ಯ, 4405 ಡೆಂಗ್ಯೂ, 345 ಎಚ್1ಎನ್1 ಪ್ರಕರಣಗಳು ಪತ್ತೆಯಾಗಿವೆ. ಜನರು ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದರು.

Articles You Might Like

Share This Article